ರೊನಾಲ್ಡೊ ಮೋಡಿಗೆ ಶ್ರೇಷ್ಠ ಗೋಲು ಪಟ್ಟ ಮಿಲಾನ್‌, ಇಟಲಿ (ಎಎಫ್‌ಪಿ): ಹಿಂದಿನ ಋತುವಿನ ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಯುವೆಂಟಸ್‌ ಕ್ಲಬ್‌ ವಿರುದ್ದದ ಪಂದ್ಯದಲ್ಲಿ ಗಳಿಸಿದ ಗೋಲು ಋತುವಿನ ಶ್ರೇಷ್ಠ ಗೋಲು ಎಂಬ ಹಿರಿಮೆಗೆ ಪಾತ್ರವಾಗಿದೆ. ಚಾಂಪಿಯನ್ಸ್‌ ಲೀಗ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ರಿಯಲ್‌ ಮ್ಯಾಡ್ರಿಡ್‌ ಹಾಗೂ ಯುವೆಂಟಸ್‌ ಕ್ಲಬ್‌ಗಳು ಸೆಣಸಿದ್ದವು. ಇದರಲ್ಲಿ ರೊನಾಲ್ಡೊ ಅವರು ಅಮೋಘವಾದ ಬೈಸಿಕಲ್‌ ಕಿಕ್‌ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ್ದರು. ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಎದುರಾಳಿ ತಂಡದ ಆಟಗಾರರು ರೊನಾಲ್ಡೊ ಅವರ ಮೋಡಿಗೆ ಅರೆಕ್ಷಣ ಅವಾಕ್ಕಾಗಿದ್ದರು. ರಿಯಲ್‌ ಮ್ಯಾಡ್ರಿಡ್‌ ತಂಡವು 3–0 ಗೋಲುಗಳಿಂದ ಪಂದ್ಯ ಜಯಿಸಿತ್ತು. ‘ನನ್ನ ಬೈಸಿಕಲ್‌ ಕಿಕ್‌ ಪರವಾಗಿ ಮತಚಲಾಯಿಸಿದ ಎಲ್ಲರಿಗೂ ವಂದನೆಗಳು. ಪಂದ್ಯದ ಆ ಕ್ಷಣ ಅವಿಸ್ಮರಣೀಯ’ ಎಂದು ಈ ಆಟಗಾರ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ, ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಅನ್ನು ತೊರೆದಿರುವ ರೊನಾಲ್ಡೊ ಯುವೆಂಟಸ್‌ನಲ್ಲಿ ಆಡುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.