ಐಎಸ್‌ಎಲ್‌ ಫುಟ್‌ಬಾಲ್‌: ಬಿಎಫ್‌ಸಿ–ಚೆನ್ನೈಯಿನ್‌ ‘ಡರ್ಬಿ’ ಫೈಟ್‌ ಬೆಂಗಳೂರು: ಸದಾ ಒಂದಿಲ್ಲೊಂದು ಕ್ರೀಡಾಕೂಟಕ್ಕೆ ವೇದಿಕೆ ಕಲ್ಪಿಸುವ ಕಂಠೀರವ ಕ್ರೀಡಾಂಗಣದಲ್ಲಿ ಈಗ ಫುಟ್‌ಬಾಲ್‌ ಕಲರವ ಶುರುವಾಗಿದೆ. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಐದನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಮತ್ತು ಚೆನ್ನೈಯಿನ್‌ ಎಫ್‌ಸಿ ಎದುರಾಗಲಿವೆ. ದಕ್ಷಿಣ ಭಾರತದ ಈ ‘ಡರ್ಬಿ’ ಹೋರಾಟವನ್ನು ಕಣ್ತುಂಬಿಕೊಳ್ಳಲು ಉದ್ಯಾನನಗರಿಯ ಅಭಿಮಾನಿಗಳು ಕಾತರರಾಗಿದ್ದಾರೆ. ಹೋದ ವರ್ಷ ಐಎಸ್‌ಎಲ್‌ಗೆ ಅಡಿ ಇಟ್ಟಿದ್ದ ಬೆಂಗಳೂರಿನ ತಂಡ ಚೊಚ್ಚಲ ಪ್ರಯತ್ನದಲ್ಲೇ ರನ್ನರ್ಸ್‌ ಅಪ್‌ ಪ್ರಶಸ್ತಿ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿತ್ತು. ಈ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿರುವ ಸುನಿಲ್‌ ಚೆಟ್ರಿ ಪಡೆ ತವರಿನ ಅಂಗಳದಲ್ಲಿ ಜಯದ ತೋರಣ ಕಟ್ಟುವ ಹುಮ್ಮಸ್ಸಿನಲ್ಲಿದೆ. ಬಿಎಫ್‌ಸಿ, ಹೋದ ಆವೃತ್ತಿಯ ಫೈನಲ್‌ನಲ್ಲಿ ಚೆನ್ನೈಯಿನ್‌ ಎದುರು ‍ಪರಾಭವಗೊಂಡಿತ್ತು. ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಚೆಟ್ರಿ ಬಳಗಕ್ಕೆ ಈಗ ಉತ್ತಮ ಅವಕಾಶ ಸಿಕ್ಕಿದೆ. ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯ ಸೂಪರ್‌ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಬಿಎಫ್‌ಸಿ, ಬಳಿಕ ಸ್ಪೇನ್‌ ಪ್ರವಾಸ ಕೈಗೊಂಡಿತ್ತು. ಈ ವೇಳೆ ಬಾರ್ಸಿಲೋನಾ ‘ಬಿ’ ಮತ್ತು ವಿಲ್ಲಾರಿಯಲ್‌ ‘ಬಿ’ ತಂಡಗಳ ವಿರುದ್ಧ ಸೆಣಸಿತ್ತು. ನಂತರ ಐ ಲೀಗ್‌ ಕ್ಲಬ್‌ಗಳಾದ ಚೆನ್ನೈ ಸಿಟಿ ಮತ್ತು ಗೋಕುಲಮ್‌ ಕೇರಳ ಎಫ್‌ಸಿ ಎದುರು ಸೌಹಾರ್ದ ಪಂದ್ಯಗಳನ್ನು ಆಡಿ ಸಾಮರ್ಥ್ಯ ವೃದ್ಧಿಸಿಕೊಂಡಿದ್ದ ಚೆಟ್ರಿ ಪಡೆ, ತವರಿನಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ತಂಡವನ್ನು ಕಟ್ಟಿಹಾಕಲು ಹವಣಿಸುತ್ತಿದೆ. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು, ಡಿಫೆಂಡರ್‌ಗಳಾದ ರಾಹುಲ್‌ ಭೆಕೆ ಮತ್ತು ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ ಅವರು ತಂಡದ ಶಕ್ತಿಯಾಗಿದ್ದಾರೆ. ಬೊಯಿಥಾಂಗ್‌ ಹಾವೊಕಿಪ್‌, ಥಾಂಗ್‌ಕೋಶಿಮ್‌ ಹಾವೊಕಿಪ್‌ ಮತ್ತು ಉದಾಂತ್‌ ಸಿಂಗ್‌ ಅವರೂ ಆತಿಥೇಯರ ಭರವಸೆಯಾಗಿದ್ದಾರೆ. ಚೆಟ್ರಿ, ಮಿಕು, ದಿಮಾಸ್‌ ಡೆಲ್ಗಾಡೊ, ಯುನಾನ್‌ ಗೊಂಜಾಲೆಸ್‌ ಮತ್ತು ಎರಿಕ್‌ ಪಾರ್ಟಲು ಅವರೂ ಅಭಿಮಾನಿಗಳಿಗೆ ಕಾಲ್ಚೆಂಡಿನಾಟದ ಸೊಬಗು ಉಣಬಡಿಸಲು ಹಾತೊರೆಯುತ್ತಿದ್ದಾರೆ. ಚೆಟ್ರಿ ಮತ್ತು ಮಿಕು ಹೋದ ಆವೃತ್ತಿಯಲ್ಲಿ ಕ್ರಮವಾಗಿ 14 ಮತ್ತು 15 ಗೋಲು ಗಳಿಸಿದ್ದರು. ಚೆನ್ನೈಯಿನ್‌ ಎಫ್‌ಸಿ ಕೂಡಾ ಈ ಬಾರಿಯ ಲೀಗ್‌ನಲ್ಲಿ ಗೆಲುವಿನ ಮುನ್ನುಡಿ ಬರೆಯುವ ಆಲೋಚನೆ ಹೊಂದಿದೆ. ಈ ತಂಡ ಕಂಠೀರವ ಕ್ರೀಡಾಂಗಣದಲ್ಲಿ ಆಡಿರುವ ಎರಡು ಪಂದ್ಯಗಳಲ್ಲೂ ಬಿಎಫ್‌ಸಿಯನ್ನು ಸೋಲಿಸಿದೆ. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ. ಪ್ರಮುಖ ಆಟಗಾರ ಧನಪಾಲ್‌ ಗಣೇಶ್‌ ಗಾಯದ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಇದರಿಂದ ತಂಡ ಅಲ್ಪ ಹಿನ್ನಡೆ ಎದುರಾಗಿದೆ. ಟೂರ್ನಿಗೂ ಮುನ್ನ ಮಲೇಷ್ಯಾ ಪ್ರವಾಸ ಕೈಗೊಂಡಿದ್ದ ಚೆನ್ನೈಯಿನ್‌ ತಂಡ ಫೆಲ್ಡಾ ಯುನೈಟೆಡ್‌, ಟೆರೆಂಗಾನು ಎಫ್‌ಸಿ ಮತ್ತು 19 ವರ್ಷದೊಳಗಿನವರ ಮಲೇಷ್ಯಾ ತಂಡದ ವಿರುದ್ಧ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲವಾಗಿತ್ತು. ಬಿಎಫ್‌ಸಿ ತಂಡ ಗೋಲ್‌ಕೀಪರ್‌ಗಳು: ಗುರುಪ್ರೀತ್‌ ಸಿಂಗ್‌ ಸಂಧು, ಸೋರಮ್‌ ಪೊರೈ ಮತ್ತು ಆದಿತ್ಯ ಪಾತ್ರ. ಡಿಫೆಂಡರ್ಸ್‌: ಹರ್ಮನ್‌ಜ್ಯೋತ್‌ಸಿಂಗ್‌ ಖಾಬ್ರಾ, ರಿನೊ ಆ್ಯಂಟೊ, ರಾಹುಲ್‌ ಭೆಕೆ, ನಿಶು ಕುಮಾರ್‌, ಅಶೀರ್‌ ಅಖ್ತರ್‌, ಅಲ್ಬರ್ಟ್‌ ಸೆರಾನ್‌, ಗುರಸಿಮ್ರತ್‌ ಸಿಂಗ್‌ ಗಿಲ್‌, ಸೈರುತ್‌ ಕಿಮಾ ಮತ್ತು ಯುವಾನನ್‌ ಗೊಂಜಾಲೆಸ್‌. ಮಿಡ್‌ಫೀಲ್ಡರ್ಸ್‌: ದಿಮಾಸ್‌ ಡೆಲ್ಗಾಡೊ, ವಿದ್ಯಾನಂದ ಸಿಂಗ್‌, ಬೊಯಿಥಾಂಗ್‌ ಹಾವೊಕಿಪ್‌,ಕ್ಸಿಸ್ಕೊ ಹರ್ನಾಂಡೆಜ್‌, ಅಜಯ್‌ ಚೆಟ್ರಿ, ಅಲ್ತಮಸ್‌ ಸೈಯದ್‌, ಎರಿಕ್‌ ಪಾರ್ಟಲು ಮತ್ತು ಕೀನ್‌ ಲೂಯಿಸ್. ಫಾರ್ವರ್ಡ್ಸ್‌: ಸುನಿಲ್‌ ಚೆಟ್ರಿ, ಥಾಂಗ್‌ಕೋಶಿಮ್‌ ಹಾವೊಕಿಪ್‌, ಉದಾಂತ್‌ ಸಿಂಗ್‌, ಚೆಂಚೊ ಗೈಲೆಸ್ಟೇನ್‌ ಮತ್ತು ಮಿಕು. ಆರಂಭ: ಭಾನುವಾರ ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌. * ಈ ಬಾರಿಯ ಲೀಗ್‌ನಲ್ಲಿ ಶುಭಾರಂಭ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಎಲ್ಲಾ ರೀತಿಯಿಂದಲೂ ಸಜ್ಜಾಗಿದ್ದೇವೆ. ತಂಡದಲ್ಲಿರುವ ಎಲ್ಲರೂ ಗೆಲುವಿಗಾಗಿ ಶ್ರಮಿಸಲಿದ್ದಾರೆ. -ಕಾರ್ಲಸ್‌ ಕುದ್ರತ್‌,ಬಿಎಫ್‌ಸಿ ಕೋಚ್‌ * ಕಂಠೀರವದಲ್ಲಿ ಬಿಎಫ್‌ಸಿ ಎದುರು ಆಡಿರುವ ಹಿಂದಿನ ಎರಡು ಪಂದ್ಯಗಳಲ್ಲೂ ಗೆದ್ದಿದ್ದೇವೆ. ಹಾಗಂತ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ. -ಜಾನ್‌ ಗ್ರೆಗೊರಿ, ಚೆನ್ನೈಯಿನ್‌ ಕೋಚ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.