ಫುಟ್‌ಬಾಲ್‌: ಸಮಾನಂದ ಮಿಂಚು ಬೆಂಗಳೂರು: ಸಮಾನಂದ ಅವರು ಗಳಿಸಿದ ಗೋಲಿನ ನೆರವಿನಿಂದ ಎಎಸ್‌ಸಿ ಮತ್ತು ಸೆಂಟರ್‌ ತಂಡವು ಸಿ. ಪುಟ್ಟಯ್ಯ ಸ್ಮಾರಕ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಮಂಗಳವಾರ ಇಲ್ಲಿನ ಅಶೋಕನಗರದಲ್ಲಿರುವ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಎಸ್‌ಸಿ ಮತ್ತು ಸೆಂಟರ್‌ ತಂಡವು 1–0ಗೋಲಿನಿಂದ ಬೆಂಗಳೂರು ಇಂಡಿಪೆಂಡೆಟ್ಸ್‌ ತಂಡವನ್ನು ಮಣಿಸಿತು. ಪಂದ್ಯದ ಆರಂಭದಿಂದಲೂ ವಿಜಯೀ ತಂಡವು ಗೋಲು ಗಳಿಸಲು ಯತ್ನಿಸಿತು. ಅದರ ಆಕ್ರಮಣಕಾರಿ ಆಟದ ಮುಂದೆ ಎದುರಾಳಿ ತಂಡದ ಆಟ ಸಪ್ಪೆಯಾಯಿತು. 34ನೇ ನಿಮಿಷದಲ್ಲಿ ಸಮಾನಂದ ಅವರು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮುಂದಿನ ಅವಧಿಯಲ್ಲಿ ಎರಡು ತಂಡಗಳು ಜಿದ್ದಾಜಿದ್ದಿನ ಆಟವಾಡಿದವು. ಹೀಗಾಗಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆರ್‌ಎಸ್‌ ಸ್ಪೋರ್ಟ್ಸ್‌ಗೆ ಜಯ: ಸೂರ್ಯ ಹಾಗೂ ಸುನಿಲ್‌ ಅವರ ಅಮೋಘ ಆಟದ ನೆರವಿನಿಂದ ಆರ್‌ಎಸ್‌ ಸ್ಪೋರ್ಟ್ಸ್‌ ತಂಡವು ಪ್ರಸನ್ನ ಕುಮಾರ್‌ ಸ್ಮಾರಕ ಎ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಆರ್‌ಡಬ್ಲ್ಯುಎಫ್‌ ತಂಡದ ಎದುರು ಗೆದ್ದಿದೆ. ಆರ್‌ಎಸ್‌ ಸ್ಪೋರ್ಟ್ಸ್‌ ತಂಡ 3–1ರಿಂದ ಆರ್‌ಡಬ್ಲ್ಯುಎಫ್‌ ತಂಡವನ್ನು ಮಣಿಸಿತು. ವಿಜಯೀ ತಂಡದ ಸೂರ್ಯ (47 ನೇ ನಿ., 71 ನೇ ನಿ.) ಎರಡು ಹಾಗೂ ಸುನಿಲ್‌ (73ನೇ ನಿ.) ಅವರು ಒಂದು ಗೋಲು ಗಳಿಸಿದರು. ಆರ್‌ಡಬ್ಲ್ಯುಎಫ್‌ ತಂಡದ ಭಾಸ್ಕರ್‌ (20ನೇ ನಿ.) ಅವರು ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.