ಜೂನಿಯರ್‌ ತಂಡಗಳ ಸಾಧನೆ: ಸುನಿಲ್‌ ಚೆಟ್ರಿ ಶ್ಲಾಘನೆ ನವದೆಹಲಿ: ‘ಭಾರತದ ಜೂನಿಯರ್‌ ಫುಟ್‌ಬಾಲ್‌ ತಂಡಗಳು ನಿರೀಕ್ಷೆಗೂ ಮೀರಿ ಉತ್ತಮ ಸಾಮರ್ಥ್ಯ ತೋರುತ್ತಿವೆ’ ಎಂದು ಭಾರತ‌ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಹೇಳಿದ್ದಾರೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಭಾರತದ ಹದಿನಾರು ವರ್ಷದೊಳಗಿನವರ ತಂಡವು ಇರಾಕ್‌ ತಂಡವನ್ನು ಮಣಿಸಿತ್ತು. ಸ್ಪೇನ್‌ನಲ್ಲಿ ನಡೆದ ಟೂರ್ನಿಯಲ್ಲಿ20 ವರ್ಷದೊಳಗಿನವರ ತಂಡವು ಅರ್ಜೆಂಟೀನಾ ತಂಡವನ್ನು ಸೋಲಿಸಿ ಅಚ್ಚರಿ ಮೂಡಿಸಿತ್ತು. ‘ಇತ್ತೀಚಿನ ದಿನಗಳಲ್ಲಿ ಈ ಎರಡು ತಂಡಗಳು ಅಮೋಘ ರೀತಿಯಲ್ಲಿ ಆಟವಾಡುತ್ತಿವೆ. ನಿಜಕ್ಕೂ ಹೆಮ್ಮೆಯಾಗುತ್ತದೆ. ಉಭಯ ತಂಡಗಳ ಆಟ ನೋಡಲು ಖುಷಿಯಾಗುತ್ತದೆ. 16 ವರ್ಷದೊಳಗಿನವರ ತಂಡದ ಕೋಚ್‌ ಬಿಬಿಯಾನೊ ಫರ್ನಾಂಡೆಸ್‌ ಅವರು ಉತ್ತಮ ಆಟಗಾರರ ಪಡೆ ಕಟ್ಟಿದ್ದಾರೆ’ ಎಂದು ಚೆಟ್ರಿ ಹೇಳಿದ್ದಾರೆ. ‘ಭವಿಷ್ಯದಲ್ಲಿ ಈ ತಂಡಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿವೆ’ ಎಂದು ಅವರು ತಿಳಿಸಿದ್ದಾರೆ. ‘ಮುಂದಿನ ವರ್ಷ ನಡೆಯುವ ಎಎಫ್‌ಸಿ ಏಷ್ಯಾ ಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ನಾವು ಈಗಿನಿಂದಲೇ ಸಿದ್ಧವಾಗುತ್ತಿದ್ದೇವೆ. ಅದಕ್ಕಿಂತ ಮುನ್ನ ಕೆಲವು ಪಂದ್ಯಗಳಲ್ಲು ಆಡಬೇಕಿದೆ’ ಎಂದೂ ಅವರು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಆರಂಭವಾಗುವ ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಸುನಿಲ್‌ ಚೆಟ್ರಿ ಅವರು ಮುನ್ನಡೆಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.