ಮಾಡ್ರಿಚ್‌ಗೆ ವರ್ಷದ ಶ್ರೇಷ್ಠ ಆಟಗಾರ ಗೌರವ ಲಂಡನ್‌: ಕ್ರೊವೇಷ್ಯಾದ ಮಿಡ್‌ಫೀಲ್ಡರ್ ಲೂಕಾ ಮಾಡ್ರಿಕ್‌ ಅವರು ಫಿಫಾ ನೀಡುವ ‘ವರ್ಷದ ಶ್ರೇಷ್ಠ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಡ್ರಿಕ್‌ ಅವರು ‍‍ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಈಜಿಪ್ಟ್‌ನ ಮೊಹಮ್ಮದ್‌ ಸಲಾ ಅವರನ್ನು ಹಿಂದಿಕ್ಕಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ. ರೊನಾಲ್ಡೊ, ಸಲಾ ಮತ್ತು ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರು ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. 33 ವರ್ಷ ವಯಸ್ಸಿನ ಲೂಕಾ ಅವರ ಸಾರಥ್ಯದಲ್ಲಿ ಕ್ರೊವೇಷ್ಯಾ ತಂಡ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿ ದಾಖಲೆ ನಿರ್ಮಿಸಿತ್ತು. ‘ಈ ಋತು ನನ್ನ ಪಾಲಿಗೆ ಸ್ಮರಣೀಯವಾದುದು. ಕ್ರೊವೇಷ್ಯಾ ತಂಡ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದು ಹೆಮ್ಮೆಯ ವಿಷಯ. ಈ ಸಾಧನೆಯ ಹಿಂದೆ ಸಾಕಷ್ಟು ಮಂದಿಯ ಪರಿಶ್ರಮವಿದೆ. ಅವರಿಗೆಲ್ಲಾ ಕೃತಜ್ಞನಾಗಿದ್ದೇನೆ’ ಎಂದು ಲೂಕಾ ಸಂತಸ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್‌ ತಂಡ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದ ತರಬೇತುದಾರ ಡಿಡಿಯರ್‌ ಡೆಶ್ಚಾಂಪ್ಸ್‌ ಅವರು ‘ವರ್ಷದ ಶ್ರೇಷ್ಠ ಕೋಚ್‌’ ಗೌರವ ಪಡೆದರು. ಬೆಲ್ಜಿಯಂ ತಂಡದ ತಿಬೌಟ್‌ ಕರ್ಟಿಸ್‌ ‘ಶ್ರೇಷ್ಠ ಗೋಲ್‌ಕೀಪರ್‌’ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬ್ರೆಜಿಲ್‌ನ ಮಾರ್ಟಾ ವಿಯೀರಾ ಡಿಸಿಲ್ವ ಅವರು ‘ವರ್ಷದ ಶ್ರೇಷ್ಠ ಆಟಗಾರ್ತಿ’ ಪುರಸ್ಕಾರಕ್ಕೆ ಪಾತ್ರರಾದರು. ರೆನಾಲ್ಡ್‌ ಪೆಡ್ರೋಸ್‌ ‘ಶ್ರೇಷ್ಠ ಮಹಿಳಾ ಕೋಚ್‌’ ಗೌರವಕ್ಕೆ ಭಾಜನರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.