ಫುಟ್‌ಬಾಲ್‌: ಬಿಎಫ್‌ಸಿಗೆ ಜಯ ಬೆಂಗಳೂರು: ಪರಾಗ್‌ ಶ್ರಜ್ವಾಸ್‌ ಅವರು ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಸಿ. ಪುಟ್ಟಯ್ಯ ಸ್ಮಾರಕ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಬುಧವಾರ ಇಲ್ಲಿನ ಅಶೋಕನಗರದಲ್ಲಿರುವ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ, 1–0 ಗೋಲಿನಿಂದ ಜವಾಹರ್‌ ಯೂನಿಯನ್‌ ಎಫ್‌ಸಿ ತಂಡವನ್ನು ಮಣಿಸಿತು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ಆದರೆ, ವಿರಾಮದ ನಂತರ ಬಿಎಫ್‌ಸಿಯ ಪರಾಗ್‌ ಅವರು (47ನೇ ನಿ.) ಚೆಂಡನ್ನು ಗುರಿ ಸೇರಿಸಿ ತಂಡಕ್ಕೆ ಮುನ್ನಡೆ ತಂಡುಕೊಟ್ಟರು. ಮುಂದಿನ ಅವಧಿಯಲ್ಲಿ ಬಿಎಫ್‌ಸಿಯ ರಕ್ಷಣಾ ವಿಭಾಗದ ಆಟಗಾರರು ಎಚ್ಚರಿಕೆಯ ಆಟವಾಡಿದರು. ಇದರಿಂದಾಗಿ ಎದುರಾಳಿ ತಂಡವು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಮಿಂಚಿದ ಸೂರ್ಯ: ಸೂರ್ಯ ಅವರ ಅಮೋಘ ಆಟದ ನೆರವಿನಿಂದ ಡೆಕ್ಕನ್‌ ಎಫ್‌ಸಿ ತಂಡವು ಪ್ರಸನ್ನ ಕುಮಾರ್‌ ಸ್ಮಾರಕ ಎ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಯಿಸಿದೆ. ಡೆಕ್ಕನ್‌ ಎಫ್‌ಸಿ ತಂಡವು 3–2 ಗೋಲುಗಳಿಂದ ಡೈಸ್‌ ಎಫ್‌ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ಸೂರ್ಯ (19ನೇ ನಿ., 25ನೇ ನಿ.) ಅವರು ಎರಡು ಗೋಲು ಗಳಿಸಿದರು. ವಿಕಿ, ಒಂದು ಗೋಲು (60ನೇ ನಿ.) ದಾಖಲಿಸಿದರು. ಡೈಸ್‌ ತಂಡದ ಅತೀಫ್‌ ಮುಜಾವರ್‌ (14ನೇ ನಿ.) ಹಾಗೂ ಎಚ್‌.ಸಿ. ದಿಲೀಪ್‌ ಗೌಡ (76 ನೇ ನಿ.) ಅವರು ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.