ಏಷ್ಯಾಕಪ್ ಫುಟ್‌ಬಾಲ್‌ಗೂ ಬರಲಿದೆ ಡಿಆರ್‌ಎಸ್‌ ಮುಂಬೈ: ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ವಿಡಿಯೊ ಅಸಿಸ್ಟಂಟ್ ರೆಫರಿ (ವಿಎಆರ್‌) ಪದ್ಧತಿಯನ್ನು ಜಾರಿಗೆ ತರುವ ಚಿಂತನೆ ನಡೆದಿದೆ. ಏಷ್ಯನ್ ಫುಟ್‌ಬಾಲ್‌ ಕಾನ್ಫೆಡರೇಷನ್‌ನ (ಎಎಫ್‌ಸಿ) ಪ್ರಾದೇಶಿಕ ಆಡಳಿತ ಮಂಡಳಿ ಈ ವಿಷಯವನ್ನು ಗುರುವಾರ ಖಚಿತಪಡಿಸಿದೆ. ಸ್ಪೇನ್‌, ಇಟಲಿ ಮತ್ತು ಜರ್ಮನಿಯಲ್ಲಿ ನಡೆಯುವ ಪ್ರಮುಖ ಫುಟ್‌ಬಾಲ್ ಲೀಗ್‌ಗಳಲ್ಲಿ ಈ ಪದ್ಧತಿಯನ್ನು ಬಳಸಲಾಗುತ್ತಿದೆ. ಈ ವರ್ಷ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲೂ ಇದನ್ನು ಬಳಸಲಾಗಿತ್ತು. ವಿಎಆರ್‌ ಬಳಸಲು ಫಿಫಾದಿಂದ ಮತ್ತು ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಗಳ ಮಂಡಳಿಯಿಂದ (ಐಎಫ್‌ಎಬಿ) ಅನುಮತಿ ಲಭಿಸಿದ್ದು ಜನವರಿ ಐದರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ನಲ್ಲಿ ಮೊದಲ ಬಾರಿಗೆ ಜಾರಿಗೆ ಬರಲಿದೆ. ಕೆಲವು ಹಂತದ ಪಂದ್ಯಗಳಲ್ಲಿ ಇದನ್ನು ಬಳಸಲಾಗುವುದು ಎಂದು ಎಎಫ್‌ಸಿ ಅಧ್ಯಕ್ಷ ಶೇಕ್ ಸಲ್ಮಾನ್‌ ಬಿನ್‌ ಇಬ್ರಾಹಿಂ ಅಲ್‌ ಖಲೀಫಾ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.