ಐಎಸ್‌ಎಲ್‌: ಕಾಲ್ಚಳಕದ ಮೋಡಿ ಇಂದು ಆರಂಭ ಕೋಲ್ಕತ್ತ: ಆರು ತಿಂಗಳು ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಐದನೇ ಆವೃತ್ತಿ ಶನಿವಾರ ಇಲ್ಲಿ ಆರಂಭಗೊಳ್ಳಲಿದೆ. ಹಿಂದಿನ ಚಾಂಪಿಯನ್‌ ಎಟಿಕೆ ಮತ್ತು ಎರಡು ಬಾರಿಯ ರನ್ನರ್ ಅಪ್‌ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಲಿವೆ. ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ಮೊದಲ ಪಂದ್ಯ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಶಸ್ತಿಗಾಗಿ 10 ತಂಡಗಳು ಸೆಣಸಲಿದ್ದು ಮೊದಲ ಪಂದ್ಯದಲ್ಲೇ ರೋಚಕ ಹಣಾಹಣಿ ಕಂಡುಬರುವ ಸಾಧ್ಯತೆ ಇದೆ. ಕಳೆದ ಬಾರಿ ನೀರಸ ಆಟವಾಡಿದ್ದ ಕೇರಳ ಬ್ಲಾಸ್ಟರ್ಸ್‌ ಈ ಬಾರಿ ಹೊಸ ರಣತಂತ್ರಗಳೊಂದಿಗೆ ಕಣಕ್ಕೆ ಇಳಿದಿದ್ದು ಎದುರಾಳಿಗಳನ್ನು ಅವರ ತವರಿನಲ್ಲಿ ಮಣಿಸುವ ಭರವಸೆ ಹೊಂದಿದೆ. ಎಟಿಕೆ, ತವರಿನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಉಭಯ ತಂಡಗಳು ಈ ಹಿಂದೆ 10 ಬಾರಿ ಮುಖಾಮುಖಿಯಾಗಿದ್ದು ಎಟಿಕೆ 5 ಬಾರಿ ಗೆದ್ದಿದೆ. ಕೇರಳ ಬ್ಲಾಸ್ಟರ್ಸ್‌ ಒಂದು ಬಾರಿ ಮಾತ್ರ ಗೆಲುವು ಸಾಧಿಸಿದ್ದು ಉಳಿದ ಪಂದ್ಯಗಳು ಡ್ರಾ ಆಗಿವೆ. ‘ಟೂರ್ನಿ ಆರಂಭವಾಗಲು ಕಾತರದಿಂದ ಕಾಯುತ್ತಿದ್ದೆವು. ಸ್ಪೇನ್‌ನಲ್ಲಿ ತರಬೇತಿ ಪಡೆದಿರುವ ತಂಡದ ಆಟಗಾರರು ಜಯದ ಖಾತೆ ತೆರೆಯಲು ಹಾತೊರೆಯುತ್ತಿದ್ದಾರೆ’ ಎಂದು ಎಟಿಕೆ ಕೋಚ್‌ ಸ್ಟೀವ್‌ ಕೊಪೆಲ್ ಹೇಳಿದರು. ಐದು ವರ್ಷ ಬೆಂಗಳೂರು ಎಫ್‌ಸಿ ತಂಡದಲ್ಲಿದ್ದು ಕಳೆದ ವರ್ಷ ಎಟಿಕೆ ಸೇರಿರುವ 30 ವರ್ಷದ ಜಾನ್‌ ಜಾನ್ಸನ್‌ ಮೊದಲ ಪಂದ್ಯದಲ್ಲಿ ಮಿಂಚುವ ಉತ್ಸಾಹ ಹೊಂದಿದ್ದಾರೆ. ತಂಡದಲ್ಲಿ ಒಟ್ಟು 19 ಭಾರತೀಯ ಆಟಗಾರರು ಇದ್ದಾರೆ. ನಾಲ್ಕನೇ ಆವೃತ್ತಿಯಲ್ಲಿ ತಂಡದ ಪರ ಆಡಿದ್ದ ಆರು ಮಂದಿಯನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಸಚಿನ್‌ ಬೆಂಬಲ ಇದ್ದೇ ಇರುತ್ತದೆ ‘ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಫ್ರಾಂಚೈಸ್‌ ಮೇಲಿನ ಷೇರು ವಾಪಸ್ ತೆಗೆದುಕೊಂಡಿರಬಹುದು. ಆದರೆ ಅವರ ಬೆಂಬಲ ನಮ್ಮ ತಂಡಕ್ಕೆ ಇದ್ದೇ ಇರುತ್ತದೆ’ ಎಂದು ಕೇರಳ ಬ್ಲಾಸ್ಟರ್ಸ್ ಕೋಚ್‌ ಡೇವಿಡ್‌ ಜೇಮ್ಸ್ ಶುಕ್ರವಾರ ಅಭಿಪ್ರಾಯಪಟ್ಟರು. ಫ್ರಾಂಚೈಸ್ ಮೇಲಿನ ತಮ್ಮ ಶೇಕಡಾ 20ರ ಷೇರನ್ನು ಸಚಿನ್ ಇತ್ತೀಚೆಗೆ ವಾಪಸ್ ತೆಗೆದುಕೊಂಡಿದ್ದರು. ಆದರೆ, ‘ನನ್ನ ಹೃದಯ ಸದಾ ಈ ತಂಡಕ್ಕಾಗಿ ಮಿಡಿಯಲಿದೆ’ ಎಂದಿದ್ದರು. ‘ಕೇರಳ ಬ್ಲಾಸ್ಟರ್ಸ್‌ ತಂಡದ ಹೆಸರು ಸಚಿನ್‌ ಜೊತೆ ಸದಾ ಮಿಳಿತವಾಗಿರುತ್ತದೆ. ಅವರು ತಂಡದ ಜೊತೆಗಿನ ಸಂಬಂಧವನ್ನು ತೊರೆದದ್ದು ನಾಚಿಕೆಯ ವಿಷಯ’ ಎಂದು ಜೇಮ್ಸ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.