ಮಂಗೋಲಿಯಾಕ್ಕೆ ಮಣಿದ ಭಾರತ ಉಲನ್‌ ಬಾತರ್‌: ಭಾರತದ ಮಹಿಳಾ ತಂಡದವರು 16 ವರ್ಷದೊಳಗಿನವರ ಎಎಫ್‌ಸಿ ಅರ್ಹತಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸೋತಿದ್ದಾರೆ. ಶುಕ್ರವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ಆತಿಥೇಯ ಮಂಗೋಲಿಯಾ 2–1 ಗೋಲುಗಳಿಂದ ಭಾರತದ ಎದುರು ಗೆದ್ದಿತು. ಈ ಸೋಲಿನೊಂದಿಗೆ ಸಿಲ್ಕಿ ದೇವಿ ಬಳಗ ‍ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು. ಮೂರು ಪಂದ್ಯಗಳನ್ನು ಆಡಿರುವ ಭಾರತದ ಖಾತೆಯಲ್ಲಿ ಆರು ಪಾಯಿಂಟ್ಸ್‌ಗಳಿವೆ. ಒಂಬತ್ತು ಪಾಯಿಂಟ್ಸ್‌ ಸಂಗ್ರಹಿಸಿರುವ ಲಾವೋಸ್‌ ತಂಡ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ನಡೆಯುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸಿಲ್ಕಿ ದೇವಿ ಪಡೆ ಲಾವೋಸ್‌ ಎದುರು ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಎರಡನೇ ಹಂತಕ್ಕೆ ಅರ್ಹತೆ ಗಳಿಸಲಿದೆ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ಆರನೇ ನಿಮಿಷದಲ್ಲಿ ಖಾತೆ ತೆರೆಯಿತು. ‘ಫ್ರೀ ಕಿಕ್‌’ನಲ್ಲಿ ಅವೇಕಾ ಚೆಂಡನ್ನು ಗುರಿ ಮುಟ್ಟಿಸಿದರು. ಮೊದಲಾರ್ಧದ ಆಟ ಮುಗಿಯಲು ಕೆಲ ನಿಮಿಷಗಳು ಬಾಕಿ ಇದ್ದಾಗ ಮಂಗೋಲಿಯಾ ತಂಡದ ಮಿಡ್‌ಫೀಲ್ಡರ್‌ ಗಾಂಟಮುರ್‌ ಗೋಲು ದಾಖಲಿಸಿದರು. ಹೀಗಾಗಿ ಉಭಯ ತಂಡಗಳು 1–1ರ ಸಮಬಲದೊಂದಿಗೆ ವಿರಾಮಕ್ಕೆ ಹೋದವು. ದ್ವಿತೀಯಾರ್ಧದಲ್ಲಿ ಮಂಗೋಲಿಯಾ ತಂಡ ಪರಿಣಾಮಕಾರಿ ಸಾಮರ್ಥ್ಯ ತೋರಿತು. 70ನೇ ನಿಮಿಷದಲ್ಲಿ ಈ ತಂಡದ ಕುಲಾಂಗೂ ಗೋಲು ಬಾರಿಸಿ ಆತಿಥೇಯರ ಸಂಭ್ರಮಕ್ಕೆ ಕಾರಣರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.