ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ ಶುಭಾರಂಭ ಬೆಂಗಳೂರು: ವಿನೀಶ್‌ ಬಾಲನ್‌ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಸಿ.ಪುಟ್ಟಯ್ಯ ಸ್ಮಾರಕ ಕಪ್‌ಗಾಗಿ ನಡೆಯುತ್ತಿರುವ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಶುಭಾರಂಭ ಮಾಡಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ಬೆಂಗಳೂರು ಯುನೈಟೆಡ್‌ 1–0 ಗೋಲಿನಿಂದ ಜವಾಹರ ಯೂನಿಯನ್‌ ಎಫ್‌ಸಿ ವಿರುದ್ಧ ಗೆದ್ದಿತು. ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ 25ನೇ ನಿಮಿಷದವರೆಗೂ ಸಮಬಲದ ಹೋರಾಟ ಕಂಡುಬಂತು. 26ನೇ ನಿಮಿಷದಲ್ಲಿ ಅಮೋಸ್‌ ಬಳಗ ಖಾತೆ ತೆರೆಯಿತು. ವಿನೀಶ್‌ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು. ಎಫ್‌ಸಿ ಡೆಕನ್‌ಗೆ ಜಯ: ಪ್ರಸನ್ನ ಕುಮಾರ್ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಎಫ್‌ಸಿ ಡೆಕನ್‌ ತಂಡ ಗೆದ್ದಿದೆ. ‘ಜಿ’ ಗುಂಪಿನ ಹಣಾಹಣಿಯಲ್ಲಿ ಡೆಕನ್‌ 4–2 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು. ವಿಜಯಿ ತಂಡದ ಸೂರ್ಯ 23 ಮತ್ತು 69ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಗಮನ ಸೆಳೆದರು. ವಿಕಿ (8ನೇ ನಿ.) ಮತ್ತು ಶೆರ್ವಿನ್‌ (35ನೇ ನಿ.) ತಲಾ ಒಂದು ಗೋಲು ಬಾರಿಸಿದರು. ಆರ್‌.ಎಸ್‌.ಸ್ಪೋರ್ಟ್ಸ್‌ ತಂಡದ ವಿಜಯ್‌ (19ನೇ ನಿ.) ಮತ್ತು ಸೂರ್ಯ (52ನೇ ನಿ.) ತಲಾ ಒಮ್ಮೆ ಚೆಂಡನ್ನು ಗುರಿ ತಲುಪಿಸಿ ಸೋಲಿನ ನಡುವೆಯೂ ಗಮನ ಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.