ಫುಟ್‌ಬಾಲ್‌: ಮನವೀರ್ ಸಿಂಗ್‌ ಹ್ಯಾಟ್ರಿಕ್ ಬೆಂಗಳೂರು: ಮನವೀರ್ ಸಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ನಗರದ ಓಜೋನ್‌ ಎಫ್‌ಸಿ ತಂಡ ಬಿಡಿಎಫ್‌ಎ ಪುಟ್ಟಯ್ಯ ಸ್ಮಾರಕ ಸೂಪರ್ ಡಿವಿಷನ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು. ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಓಜೋನ್‌ ತಂಡ ಸ್ಟೂಡೆಂಟ್ ಯೂನಿಯನ್ ತಂಡವನ್ನು ಏಕಪಕ್ಷೀಯವಾದ ಆರು ಗೋಲುಗಳಿಂದ ಮಣಿಸಿತು. ಮನವೀರ್ ಅವರು 17, 31 ಮತ್ತು 60ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಕಪಿಲ್‌ (58ನೇ ನಿಮಿಷ), ಗ್ಲೆನ್‌ (85ನೇ ನಿ) ಮತ್ತು ಮಾರ್ಕ್‌ (87ನೇ ನಿ) ತಂಡಕ್ಕಾಗಿ ಗೋಲು ಗಳಿಸಿದರು. ಭಾನುವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಎಂಇಜಿ ಮತ್ತು ಬೆಂಗಳೂರು ಡ್ರೀಮ್‌ ಯುನೈಟೆಡ್‌, ‘ಎಚ್‌’ ಗುಂಪಿನ ಪಂದ್ಯದಲ್ಲಿ ಪೋಸ್ಟಲ್‌ ಎಫ್‌ಸಿ ಮತ್ತು ಯಂಗ್ ಚಾಲೆಂಜರ್ಸ್‌ ಎಫ್‌ಸಿ ತಂಡಗಳು ಸೆಣಸಲಿವೆ. ಮಿಂಚಿದ ಪ್ರಕಾಶ್‌: ನಿರ್ಣಾಯಕ ಹಂತದಲ್ಲಿ ಅನುಭವಿ ಆಟಗಾರ ಪ್ರಕಾಶ್ ಗಳಿಸಿದ ಗೋಲಿನ ಮೂಲಕ ರೈಲು ಗಾಲಿ ಕಾರ್ಖಾನೆ ತಂಡ ಪ್ರಸನ್ನ ಕುಮಾರ್ ಸ್ಮಾರಕ ‘ಎ’ ಡಿವಿಷನ್ ಟೂರ್ನೀಯ ಪಂದ್ಯದಲ್ಲಿ ಎಜಿಒಆರ್‌ಸಿ ತಂಡದ ಎದುರು 2–2ರ ಡ್ರಾ ಸಾಧಿಸಿತು. 23ನೇ ನಿಮಿಷದಲ್ಲಿ ಗೋಲು ಗಳಿಸಿದ ಸುದರ್ಶನ್‌ ಎಜಿಒಆರ್‌ಸಿಗೆ ಮುನ್ನಡೆ ಗಳಿಸಿಕೊಟ್ಟಿದ್ದರು. ಆದರೆ 66ನೇ ನಿಮಿಷದಲ್ಲಿ ತಿರುಗೇಟು ನೀಡಿದ ನಂದಕುಮಾರ್ ಸಮಬಲ ಸಾಧಿಸಿದರು. 70ನೇ ನಿಮಿಷದಲ್ಲಿ ಮುರಳೀಧರ್ ಚೆಂಡನ್ನು ಗುರಿ ಸೇರಿಸಿ ಎಜಿಒಆರ್‌ಸಿ ಪಾಳಯದಲ್ಲಿ ಮತ್ತೆ ಸಂಭ್ರಮ ಮೂಡಿಸಿದರು. ಆದರೆ 80+2ನೇ ನಿಮಿಷದಲ್ಲಿ ಪ್ರಕಾಶ್ ಗೋಲು ಗಳಿಸಿ ಸಮಬಲ ಸಾಧಿಸಲು ನೆರವಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.