ಫುಟ್‌ಬಾಲ್‌: ಸೌಥ್‌ ಯುನೈಟೆಡ್‌ ಎಫ್‌ಸಿಗೆ ಜಯ ಬೆಂಗಳೂರು: ಮಹೇಶ್‌ ಹಾಗೂ ಲೊಕೇಶ್‌ ಅವರು ಗಳಿಸಿದ ಗೋಲುಗಳ ನೆರವಿನಿಂದ ಸೌಥ್‌ ಯುನೈಟೆಡ್‌ ಎಫ್‌ಸಿ ತಂಡವು ಬಿಡಿಎಫ್‌ಎ ಆಶ್ರಯದ ಸಿ. ಪುಟ್ಟಯ್ಯ ಸ್ಮಾರಕ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿದೆ. ಸೋಮವಾರ ಇಲ್ಲಿನ ಅಶೋಕನಗರದಲ್ಲಿರುವ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಸೌಥ್‌ ಯುನೈಟೆಡ್‌ ಎಫ್‌ಸಿ ತಂಡವು 2–0 ಗೋಲುಗಳಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ಪರವಾಗಿ ಮಹೇಶ್‌ (8ನೇ ನಿ.) ಹಾಗೂ ಲೊಕೇಶ್‌ (80 ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿದರು. ತೆರಿಗೆ ಇಲಾಖೆ ತಂಡಕ್ಕೆ ಜಯ: ಅಹ್ಮದ್‌ ಹಾಗೂ ಶಿವಪ್ರಸಾದ್‌ ಅವರ ಅಮೋಘ ಆಟದ ಬಲದಿಂದ ತೆರಿಗೆ ಇಲಾಖೆ ತಂಡವು ಪ್ರಸನ್ನಕುಮಾರ್‌ ಸ್ಮಾರಕ ಎ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪರಿಕ್ರಮ ಎಫ್‌ಸಿ ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ. ತೆರಿಗೆ ಇಲಾಖೆ ತಂಡದ ಪರವಾಗಿ ಅಹ್ಮದ್‌ (18ನೇ ನಿ.) ಹಾಗೂ ಶಿವಪ್ರಸಾದ್‌ (43ನೇ ನಿ.) ಅವರು ಗೋಲು ಗಳಿಸಿದರು. ಪರಿಕ್ರಮ ಎಫ್‌ಸಿ ತಂಡದ ಪರವಾಗಿ ಜಾಮ್‌ಖೋಸಿ (8ನೇ ನಿ.)ಅವರು ಗೋಲು ಬಾರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.