ಫುಟ್‌ಬಾಲ್‌: ಭಾರತಕ್ಕೆ ಸೋಲು ನವದೆಹಲಿ: ಹತ್ತೊಂಬತ್ತು ವರ್ಷದೊಳಗಿನವರ ಭಾರತ ಫುಟ್‌ಬಾಲ್‌ ತಂಡವು ಸರ್ಬಿಯಾ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲೂ ಸೋತಿದೆ. ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 3–1 ಗೋಲುಗಳಿಂದ ಪ್ರವಾಸಿ ತಂಡವನ್ನು ಮಣಿಸಿತು. ಫ್ಲಾಯ್ಡ್‌ ಪಿಂಟೊ ಅವರ ಮಾರ್ಗದರ್ಶನದ ಭಾರತ ತಂಡವುಮೊದಲ ಅಭ್ಯಾಸ ಪಂದ್ಯದಲ್ಲೂ 0–2ರಿಂದ ಪರಾಭವಗೊಂಡಿತ್ತು. ಮುಂದಿನ ವರ್ಷ ನಡೆಯುವ ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಪೂರ್ವಸಿದ್ಧತೆಗಾಗಿ ಈ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಆಕ್ರಮಣಕಾರಿ ಆಟವಾಡಿದವು. ಈ ವೇಳೆ ಭಾರತದ ಅಮರ್ಜಿತ್‌ ಸಿಂಗ್‌ ಅವರು ಗೋಲು ಗಳಿಸಲು ಯತ್ನಿಸಿದರು. ಆದರೆ, ಯಶಸ್ವಿಯಾಗಲಿಲ್ಲ. ಮುಂದೆ ಸರ್ಬಿಯಾದ ಬೊಜಿಕ್‌ ಬೊಜನ್‌ ಅವರು ಅಮೋಘ ಗೋಲು ದಾಖಲಿಸಿ 1–0 ಮುನ್ನಡೆಗೆ ಕಾರಣರಾದರು. ಮುಂದಿನ ಕೆಲಹೊತ್ತಿನಲ್ಲಿ ಒಗಂಜೆನೊವಿಚ್‌ ಮಾರ್ಕೊ ಮತ್ತೊಂದು ಗೋಲು ಗಳಿಸಿದರು. ಭಾರತ ತಂಡದ ರಕ್ಷಣಾ ಪಡೆ ಒತ್ತಡಕ್ಕೆ ಸಿಲುಕಿತು. ಇದಾಗಿ ಸ್ವಲ್ಪಹೊತ್ತಿನಲ್ಲಿ ಸರ್ಬಿಯಾ ತನ್ನ ಮುನ್ನಡೆಯನ್ನು 3–0ಗೆ ಹೆಚ್ಚಿಸಿಕೊಂಡಿತು. ದ್ವಿತೀಯಾರ್ಧದ ಆರಂಭದಲ್ಲಿ ಭಾರತ ತಂಡದ ರಹೀಮ್‌ ಅಲಿ ಅವರು ಚೆಂಡನ್ನು ಗುರಿ ಸೇರಿಸಿದರು. ಆದರೆ, ಪಂದ್ಯದ ಉಳಿದ ಅವಧಿಯಲ್ಲಿ ಸರ್ಬಿಯಾದ ರಕ್ಷಣಾ ಪಡೆಯ ಆಟಗಾರರು ಎಚ್ಚರಿಕೆಯ ಆಟವಾಡಿದರು. ಹೀಗಾಗಿ ಇನ್ನೊಂದು ಗೋಲು ಗಳಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.