ಮೆಸ್ಸಿ ಅಮೋಘ ಹ್ಯಾಟ್ರಿಕ್‌: ಬಾರ್ಸಿಲೋನಾಗೆ ಜಯ ಪ್ಯಾರಿಸ್‌: ಲಯೊನೆಲ್‌ ಮೆಸ್ಸಿ ಅವರ ಅಮೋಘ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬಾರ್ಸಿಲೋನಾ ತಂಡವು ಯುಎಎಫ್‌ಎ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಜಯ ಸಾಧಿಸಿದೆ. ಮಂಗಳವಾರ ತಡರಾತ್ರಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಬಾರ್ಸಿಲೋನಾ ತಂಡವು 4–0 ಗೋಲುಗಳಿಂದ ಪಿಎಸ್‌ವಿ ಇಂದೋವೆನ್‌ ತಂಡವನ್ನು ಮಣಿಸಿತು. ಇದರೊಂದಿಗೆ ಬಾರ್ಸಿಲೋನಾ ಈ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಂದ್ಯದ ಮೊದಲಾರ್ಧದಲ್ಲಿ ಸಿಕ್ಕಿದ ಫ್ರೀ ಕಿಕ್‌ ಅವಕಾಶವನ್ನು ಮೆಸ್ಸಿ ಸದುಪಯೋಗಪಡಿಸಿಕೊಂಡರು. ಅವರ ಅದ್ಭುತ ಕಾಲ್ಚಳಕದಲ್ಲಿ ಅರಳಿದ ಗೋಲಿನಿಂದಾಗಿ ಬಾರ್ಸಿಲೋನಾ 1–0 ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲಿ ಉಸ್ಮಾನ್‌ ಡೆಂಬೆಲ್‌ ಅವರು ಎರಡನೇ ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಮುಂದಿನ ಅವಧಿಯಲ್ಲಿ ಮೆಸ್ಸಿ ಮಿಂಚಿದರು. ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು. ಇದರೊಂದಿಗೆ ಚಾಂಪಿಯನ್ಸ್‌ ಲೀಗ್‌ನಲ್ಲಿ ಎಂಟು ಬಾರಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಹೆಗ್ಗಳಿಕೆಗೆ ಅವರು ಪಾತ್ರರಾದರು. ಯುವೆಂಟಸ್‌ ಕ್ಲಬ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಏಳು ಬಾರಿ ಈ ಸಾಧನೆ ಮಾಡಿದ್ದಾರೆ. ಫರ್ಮಿನೊ ಮಿಂಚು: ಇನ್ನೊಂದು ಪಂದ್ಯದಲ್ಲಿ ರಾಬರ್ಟೊ ಫರ್ಮಿನೊ ಅವರು ಗಳಿಸಿದ ಗೋಲಿನಿಂದಾಗಿ ಲೀವರ್‌ಪೂಲ್‌ ತಂಡವು 3–2ರಿಂದ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ತಂಡವನ್ನು ಮಣಿಸಿತು. ಸಿ ಗುಂಪಿನ ಪಂದ್ಯದ ಮೊದಲಾರ್ಧದಲ್ಲಿ ಲೀವರ್‌ಪೂಲ್‌ ಮುನ್ನಡೆ ಸಾಧಿಸಿತು. ಡೆನಿಯಲ್‌ ಸ್ಟರ್ರಿಜ್‌ ಹಾಗೂ ಜೇಮ್ಸ್‌ ಮಿಲ್ನರ್‌ ಅವರು ಗೋಲು ಗಳಿಸಿದರು. ಆದರೆ, ಪಿಎಸ್‌ಜಿ ತಿರುಗೇಟು ನೀಡಿತು. ಥಾಮಸ್‌ ನ್ಯುಯರ್‌ ಚೆಂಡನ್ನು ಗುರಿ ಸೇರಿಸಿದರು. 83ನೇ ನಿಮಿಷದಲ್ಲಿ ತಾರಾ ಆಟಗಾರರಾದ ನೇಮರ್‌ ಹಾಗೂ ಕೈಲಿಯನ್‌ ಬಾಪೆ ಮೋಡಿ ಮಾಡಿದರು. ನೇಮರ್‌ ಅವರು ನೀಡಿದ ಪಾಸ್‌ ಮೂಲಕ ಚೆಂಡನ್ನು ನೆಟ್‌ನೊಳಗೆ ಬಾಪೆ ಸೇರಿಸಿ ತಮ್ಮ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಇದಾದ ನಂತರ ಇನ್ನೇನೂ ಪಂದ್ಯ ಡ್ರಾ ಆಗಲಿದೆ ಎಂಬ ನಿರೀಕ್ಷೆ ಗರಿಗೆದರಿತು. ಆದರೆ, ಹೆಚ್ಚುವರಿ ಅವಧಿಯಲ್ಲಿ ರಾಬರ್ಟೊ ಅವರು ಗೋಲು ಗಳಿಸಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.