ಫುಟ್‌ಬಾಲ್‌: ಭಾರತಕ್ಕೆ ಮಣಿದ ಪಾಕ್‌ ನವದೆಹಲಿ: ಅಮೋಘ ಆಟ ಆಡಿದ ಭಾರತದ ಬಾಲಕಿಯರ ತಂಡ ಹದಿನಾರು ವರ್ಷದೊಳಗಿನವರ ಎಎಫ್‌ಸಿ ಮಹಿಳೆಯರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿದೆ. ಮಂಗೋಲಿಯಾದ ಉಲನ್‌ ಬಾತರ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 4–0ಯಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯದ ಆರಂಭದಿಂದಲೂ ಭಾರತದ ಬಾಲಕಿಯರು ಪ್ರಾಬಲ್ಯ ಮೆರೆದರು. 22ನೇ ನಿಮಿಷದಲ್ಲಿ ಅವಿಕಾ ಸಿಂಗ್‌ ಅವರು ಮೊದಲ ಗೋಲು ಗಳಿಸಿ ತಂಡಕ್ಕೆ 1–0ಯ ಮುನ್ನಡೆ ತಂದುಕೊಟ್ಟರು. 43ನೇ ನಿಮಿಷದಲ್ಲಿ ಪಾಕಿಸ್ತಾನದ ಗೋಲ್‌ಕೀಪರ್‌ ಆಯೇಶಾ ಅವರು ಭಾರತಕ್ಕೆ ಉಡುಗೊರೆ ಗೋಲು ನೀಡಿದರು. ಈ ಅವಧಿಯಲ್ಲಿ ಗೋಲು ಗಳಿಸಲು ಪಾಕಿಸ್ತಾನ ತಂಡವು ಹಲವು ಬಾರಿ ಯತ್ನಿಸಿತು. ಆದರೆ, ಭಾರತದ ರಕ್ಷಣಾ ಪಡೆಯ ಆಟಗಾರ್ತಿಯರು ಅದಕ್ಕೆ ಅವಕಾಶ ನೀಡಲಿಲ್ಲ. ದ್ವಿತೀಯಾರ್ಧದಲ್ಲಿ ಭಾರತ ತಂಡದ ಆಟ ರಂಗೇರಿತು. 82ನೇ ನಿಮಿಷದಲ್ಲಿ ಸುನಿತಾ ಮುಂಡಾ ಅವರು ಗೋಲು ದಾಖಲಿಸಿ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ನಾಯಕಿ ಶಿಲ್ಕಿ ದೇವಿ ಅವರು 88ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಜಯದ ಹಾದಿ ಸುಲಭಗೊಳಿಸಿದರು. ಈ ಜಯದೊಂದಿಗೆ ಭಾರತ ತಂಡವು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಅದರ ಖಾತೆಯಲ್ಲಿ ಒಟ್ಟು ಆರು ಪಾಯಿಂಟ್ಸ್‌ಗಳಿವೆ. ಸೆಪ್ಟೆಂಬರ್‌ 21ರಂದು ನಡೆಯುವ ತನ್ನ ಮೂರನೇ ಪಂದ್ಯದಲ್ಲಿ ಭಾರತ, ಆತಿಥೇಯ ಮಂಗೋಲಿಯಾ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.