ಫುಟ್‌ಬಾಲ್‌: ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ ಬೆಂಗಳೂರು: ಎಮಾನುಯೆಲ್‌ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪೈಪೋಟಿಯಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ 3–0 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಆರಂಭದಿಂದಲೇ ಚುರುಕಿನ ಆಟಕ್ಕೆ ಮುಂದಾದ ಸ್ಟೂಡೆಂಟ್ಸ್‌ ತಂಡ 33ನೇ ನಿಮಿಷದಲ್ಲಿ ಖಾತೆ ತೆರೆಯಿತು. ಎಮಾನುಯೆಲ್‌ ಗೋಲು ಗಳಿಸಿದರು. 75ನೇ ನಿಮಿಷದಲ್ಲಿ ಮತ್ತೊಮ್ಮೆ ಮೋಡಿ ಮಾಡಿದ ಎಮಾನುಯೆಲ್‌ 2–0ರ ಮುನ್ನಡೆಗೆ ಕಾರಣರಾದರು. 81ನೇ ನಿಮಿಷದಲ್ಲಿ ಅಂಕಿತ್‌ ಚೆಂಡನ್ನು ಗುರಿ ಮುಟ್ಟಿಸಿ ಗೆಲುವಿನ ಹಾದಿ ಸುಗಮ ಮಾಡಿದರು. ಎಜಿಒಆರ್‌ಸಿ ಎಫ್‌ಸಿಗೆ ಜಯ: ‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ ತಂಡ ಗೆದ್ದಿತು. ಎಜಿಒಆರ್‌ಸಿ 2–0 ಗೋಲುಗಳಿಂದ ಆರ್‌ಡಬ್ಲ್ಯುಎಫ್‌ ಎಫ್‌ಸಿ ಸವಾಲು ಮೀರಿತು. ವಿಜಯೀ ತಂಡದ ಎನ್‌.ಎಸ್‌.ಮಂಜು ಮತ್ತು ಪ್ರದೀಪ್‌ ಕುಮಾರ್‌ ಕ್ರಮವಾಗಿ 53 ಮತ್ತು 75ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.