ಐಎಸ್‌ಎಲ್‌ ಫುಟ್‌ಬಾಲ್‌: ಡ್ರಾ ಮಾಡಿಕೊಂಡ ನಾರ್ತ್‌ಈಸ್ಟ್‌ ಗುವಾಹಟಿ: ದ್ವಿತೀಯಾರ್ಧದಲ್ಲಿ ಅಮೋಘ ಸಾಮರ್ಥ್ಯ ತೋರಿದ ನಾರ್ತ್‌ಈಸ್ಟ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಐದನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು. ಇಂದಿರಾಗಾಂಧಿ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೋರಾಟದಲ್ಲಿ ನಾರ್ತ್‌ಈಸ್ಟ್‌ ತಂಡ 2–2 ಗೋಲುಗಳಿಂದ ಎಫ್‌ಸಿ ಗೋವಾ ಎದುರು ಡ್ರಾ ಮಾಡಿಕೊಂಡಿತು. ತವರಿನ ಅಭಿಮಾನಿಗಳ ಎದುರು ಆಡಿದ ನಾರ್ತ್‌ಈಸ್ಟ್‌ ತಂಡ ಎಂಟನೇ ನಿಮಿಷದಲ್ಲಿ ಖಾತೆ ತೆರೆಯಿತು. ಫೆಡೆರಿಕೊ ಗಾಲೆಗೊ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು. ಈ ಖುಷಿ ಆತಿಥೇಯರ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಗೋವಾ ತಂಡದ ಫೆರಾನ್‌ ಕೊರೊಮಿನಾಸ್‌ ಅವಕಾಶ ನೀಡಲಿಲ್ಲ. 14ನೇ ನಿಮಿಷದಲ್ಲಿ ಗೋಲು ಗಳಿಸಿದ ಅವರು 1–1ರ ಸಮಬಲಕ್ಕೆ ಕಾರಣರಾದರು. ನಂತರ ಗೋವಾ ತಂಡ ಮೇಲುಗೈ ಸಾಧಿಸಿತು. 38ನೇ ನಿಮಿಷದಲ್ಲಿ ಫೆರಾನ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. 30 ಗಜ ದೂರದಿಂದ ಅವರು ಒದ್ದ ಚೆಂಡು ಮಿಂಚಿನ ಗತಿಯಲ್ಲಿ ಸಾಗಿ ನಾರ್ತ್‌ಈಸ್ಟ್‌ ಗೋಲುಪೆಟ್ಟಿಗೆಯೊಳಗೆ ಬಿದ್ದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ದ್ವಿತೀಯಾರ್ಧದಲ್ಲಿ ನಾರ್ತ್‌ಈಸ್ಟ್‌ ಆಟ ರಂಗೇರಿತು. 53ನೇ ನಿಮಿಷದಲ್ಲಿ ಬಾರ್ತೊಲೊಮೆವ್‌ ಒಗ್‌ಬೆಕೆ ಗೋಲು ದಾಖಲಿಸಿ 2–2ರ ಸಮಬಲಕ್ಕೆ ಕಾರಣರಾದರು. ನಂತರದ ಅವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಿದ್ದರೂ ಯಾರಿಗೂ ಗೆಲುವಿನ ಗೋಲು ಗಳಿಸಲು ಆಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.