ಪುಣೆಯನ್ನು ಮಣಿಸಿದ ಗೋವಾ ಗೋವಾ: ತವರಿನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಎಫ್‌ಸಿ ಗೋವಾ ತಂಡ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯಲ್ಲಿ ಎಫ್‌ಸಿ ಪುಣೆ ಸಿಟಿ ತಂಡವನ್ನು 4–2 ಗೋಲುಗಳಿಂದ ಮಣಿಸಿತು. ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದ ಎಲ್ಲ ಗೋಲು ಗಳು ಕೂಡ ಪ್ರಥಮಾರ್ಧದಲ್ಲಿ ಮೂಡಿ ಬಂದವು. ಹಿಂದಿನ ಪಂದ್ಯಗಳಲ್ಲಿ ಉಭಯ ತಂಡಗಳು ಕೂಡ ಆಕ್ರಮಣದಲ್ಲಿ ಗಮನ ಸೆಳೆದಿದ್ದವು. ಹೀಗಾಗಿ ಭಾನುವಾರದ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಆರಂಭದಲ್ಲಿ ಎರಡೂ ತಂಡಗಳುಆಕ್ರಮಣಕಾರಿ ಆಟವಾಡಿದವು. ಐದನೇ ನಿಮಿಷದಲ್ಲಿ ಗೋವಾ ಪರ ಫೆರಾನ್ ಕೊರೊಮಿನಾಸ್ ಗೋಲು ಗಳಿಸಿದರೆ ಮಾರ್ಸೆಲೊ ಪೆರೇರ ಎಂಟನೇ ನಿಮಿಷದಲ್ಲಿ ತಿರುಗೇಟು ನೀಡಿದರು. 12ನೇ ನಿಮಿಷದಲ್ಲಿ ಹ್ಯೂಗೊ ಬೌಮೊಸ್‌ ಅವರು ಗೋವಾಗೆ ಮುನ್ನಡೆ ಗಳಿಸಿಕೊಟ್ಟರು. 20ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್‌ ಗಳಿಸಿದ ಗೋಲಿನ ಮೂಲಕ ಗೋವಾ ಮುನ್ನಡೆ ಹೆಚ್ಚಿಸಿಕೊಂಡಿತು. ಎಮಿಲಿಯಾನೊ ಅಲ್ಫಾರೊ 23ನೇ ನಿಮಿಷದಲ್ಲಿ ಉತ್ತರ ನೀಡಿದರು. 35ನೇ ನಿಮಿಷದಲ್ಲಿ ಫೆರಾನ್‌ ಗಳಿಸಿದ ಎರಡನೇ ಗೋಲಿನ ಬಲದಿಂದ ಗೋವಾ 4–2ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ದ್ವಿತೀಯಾರ್ಧದಲ್ಲಿ ಪುಣೆ ತಂಡವನ್ನು ಕಟ್ಟಿ ಹಾಕಿದ ಗೋವಾ ಜಯದ ಸವಿಯುಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.