ಫುಟ್‌ಬಾಲ್‌: ಸೌತ್‌ ಯುನೈಟೆಡ್‌ಗೆ ಜಯ ಬೆಂಗಳೂರು: ಉಮೇಶ್‌ ಹರಿಜನ್ ಗಳಿಸಿದ ಎರಡು ಗೋಲುಗಳ ಬಲದಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಸೌತ್‌ ಯುನೈಟೆಡ್‌ 5–1 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಎದುರು ಗೆದ್ದಿತು. ಸೌತ್‌ ಯುನೈಟೆಡ್‌ ತಂಡದ ಉಮೇಶ್‌ 23 ಮತ್ತು 88ನೇ ನಿಮಿಷಗಳಲ್ಲಿ ಗೋಲು ಹೊಡೆದರು. ರಂಗ್‌ಸಿಂಗ್‌ ಮುಯಿನಾವೊ (36), ಜೈಸನ್‌ ಜೋರ್ಡನ್‌ (67) ಮತ್ತು ವಿಕ್ರಂ ವೆಂಕಟಾಚಲಂ (90) ಅವರು ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು. ಬೆಂಗಳೂರು ಈಗಲ್ಸ್ ಎಫ್‌ಸಿ ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ ನಡುವಣ ದಿನದ ಇನ್ನೊಂದು ಪಂದ್ಯ ಗೋಲು ರಹಿತವಾಗಿ ಅಂತ್ಯ ಕಂಡಿತು. ‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್‌ 4–1 ಗೋಲುಗಳಿಂದ ಬೆಂಗಳೂರು ಗನ್ನರ್ಸ್‌ ಎಫ್‌ಸಿ ಎದುರು ಗೆದ್ದಿತು. ಡೆಕ್ಕನ್‌ ತಂಡದ ಸೂರ್ಯ 10, 29 ಮತ್ತು 52ನೇ ನಿಮಿಷಗಳಲ್ಲಿ ಗೋಲು ಹೊಡೆದು ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು. ಇನ್ನೊಂದು ಪಂದ್ಯದಲ್ಲಿ ಪರಿಕ್ರಮ ಎಫ್‌ಸಿ 4–0 ಗೋಲುಗಳಿಂದ ಪೋಸ್ಟಲ್‌ ಎಫ್‌ಸಿ ವಿರುದ್ಧ ವಿಜಯಿಯಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.