ಸರ್ಜಿಯೊ ಜೊತೆಗಿನ ಒಪ್ಪಂದ ಮುಂದುವರಿಕೆ ಮಡಗಾಂವ್‌ :ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ನಲ್ಲಿ ಆಡುವ ಎಫ್‌ಸಿ ಗೋವಾ ತಂಡ, ಮುಖ್ಯ ಕೋಚ್‌ ಸರ್ಜಿಯೊ ಲೊಬೆರಾ ಜೊತೆಗಿನ ಒಪ್ಪಂದವನ್ನು ಮುಂದುವರಿಸಿದೆ. ಸ್ಪೇನ್‌ನ ಸರ್ಜಿಯೊ ಅವರು ಇನ್ನು ಒಂದು ವರ್ಷ ತಂಡಕ್ಕೆ ತರಬೇತಿ ನೀಡಲಿದ್ದಾರೆ. ಸರ್ಜಿಯೊ ಅವರ ಮಾರ್ಗದರ್ಶನದಲ್ಲಿ ಎಫ್‌ಸಿ ಗೋವಾ ತಂಡ ಹಿಂದಿನ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು. ಈ ಬಾರಿಯ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎಫ್‌ಸಿ ಗೋವಾ ಅಗ್ರಸ್ಥಾನ ಗಳಿಸಿದೆ. ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿರುವ ಈ ತಂಡ ಒಟ್ಟು 16 ಪಾಯಿಂಟ್ಸ್‌ ಕಲೆಹಾಕಿದೆ. 21 ಗೋಲುಗಳನ್ನೂ ದಾಖಲಿಸಿದೆ. ‘ನನ್ನ ಮೇಲೆ ನಂಬಿಕೆ ಇಟ್ಟು ಒಪ್ಪಂದ ಮುಂದುವರಿಸಿದ್ದಕ್ಕೆ ತಂಡದ ಮಾಲೀಕರು ಮತ್ತು ಆಡಳಿತ ಮಂಡಳಿಗೆ ಆಭಾರಿಯಾಗಿದ್ದೇನೆ. ಈ ಬಾರಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಶ್ರಮಿಸುತ್ತೇನೆ’ ಎಂದು ಸರ್ಜಿಯೊ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.