ಪೊಲೀಸ್‌ ರಕ್ಷಣೆ ಬೇಕೆಂದ ರೆಫರಿಗಳು ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಲೀಗ್‌ಗಳಲ್ಲಿ ಕಾರ್ಯನಿರ್ವಹಿಸುವಾಗ ತಮಗೆ ಕಡ್ಡಾಯವಾಗಿ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಪಂದ್ಯದ ರೆಫರಿಗಳು ಒತ್ತಾಯಿಸಿದ್ದಾರೆ. ‘ಪಂದ್ಯದ ವೇಳೆ ನಾವು ನೀಡುವ ತೀರ್ಪನ್ನು ಪ್ರಶ್ನಿಸಿ ಕೆಲ ಕ್ಲಬ್‌ಗಳ ಬೆಂಬಲಿಗರು, ಆಟಗಾರರು ಮತ್ತು ನೆರವು ಸಿಬ್ಬಂದಿ ಹಲ್ಲೆಗೆ ಮುಂದಾಗುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಜೊತೆಗೆ ಬೆದರಿಕೆಯನ್ನೂ ಹಾಕುತ್ತಾರೆ. ಹೀಗಾಗಿ ಅಂಗಳದಲ್ಲಿದ್ದಷ್ಟು ಸಮಯ ಭಯದ ವಾತಾವರಣದಲ್ಲೇ ಕೆಲಸ ಮಾಡುವಂತಾಗಿದೆ. ಪೊಲೀಸ್‌ ರಕ್ಷಣೆ ನೀಡಿದರೆ ನಾವು ನಿರಾತಂಕವಾಗಿ ಕಾರ್ಯನಿರ್ವಹಿಸಬಹುದು’ ಎಂದು ಬಿಡಿಎಫ್‌ಎಗೆ ನೀಡಿರುವ ಮನವಿ ಪತ್ರದಲ್ಲಿ ರೆಫರಿಗಳು ವಿವರಿಸಿದ್ದಾರೆ ಎನ್ನಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ: ‘ರೆಫರಿಗಳ ಹಿತ ಕಾಯುವುದು ನಮ್ಮ ಕರ್ತವ್ಯ. ಈ ಸಂಬಂಧ ಶೀಘ್ರವೇ ರೆಫರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಪರಿಹರಿಸುತ್ತೇವೆ’ ಎಂದು ಬಿಡಿಎಫ್‌ಎ ಅಧ್ಯಕ್ಷ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಈ ವಿಚಾರವಾಗಿ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಪಂದ್ಯದ ವೇಳೆ ರೆಫರಿಗಳು ನೀಡುವ ತೀರ್ಪು ಅಂತಿಮವಾಗಿರುತ್ತವೆ. ಅವುಗಳನ್ನು ಪ್ರಶ್ನಿಸುವ ಅಥವಾ ಅವರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.