ಐಎಸ್‌ಎಲ್‌: ಗೋವಾಗೆ ಭರ್ಜರಿ ಜಯ ಗೋವಾ: ತವರಿನ ಪ್ರೇಕ್ಷಕರ ಮುಂದೆ ದ್ವಿತೀಯಾರ್ಧದಲ್ಲಿ ಐದು ಗೋಲುಗಳನ್ನು ಗಳಿಸಿದ ಎಫ್‌ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯರು ನಾರ್ತ್ ಈಸ್ಟ್‌ ಯುನೈಟೆಡ್‌ ತಂಡವನ್ನು 5–1ರಿಂದ ಮಣಿಸಿದರು. ನಾರ್ತ್ ಈಸ್ಟ್ ತಂಡದ ಏಕೈಕ ಗೋಲು ಕೂಡ ದ್ವಿತೀಯಾರ್ಧದಲ್ಲೇ ಮೂಡಿ ಬಂತು. ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ದ್ವಿತೀಯಾರ್ಧದಲ್ಲಿ ಗೋವಾ ಆಕ್ರಮಣಕಾರಿ ಆಟಕ್ಕೆ ನಾರ್ತ್ ಈಸ್ಟ್‌ ದಂಗಾಯಿತು. ಫೆರಾನ್ ಕೊರೊಮಿನಾಸ್ (59 ಮತ್ತು 84ನೇ ನಿಮಿಷ), ಎಡು ಬೇಡಿಯಾ (69ನೇ ನಿ), ಹ್ಯೂಗೋ ಬೌಮೋಸ್ (71ನೇ ನಿ) ಹಾಗೂ ಮಿಗುವೆಲ್ ಫೆರ್ನಾಂಡಿಸ್ (90ನೇ ನಿಮಿಷ) ಗೋಲು ಗಳಿಸಿದರು. ನಾರ್ತ್ ಈಸ್ಟ್ ಪರ ನಾಯಕ ಬಾರ್ತಲೊಮ್ಯೊ ಒಗ್ಬಚೆ 90ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಈ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಗೋವಾ ಮೂರನೇ ಸ್ಥಾನಕ್ಕೇರಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.