ಸೀರಿ ‘ಎ’ ಫುಟ್‌ಬಾಲ್‌: ಸೋಲು ತಪ್ಪಿಸಿದ ರೊನಾಲ್ಡೊ ಮಿಲಾನ್‌: ಬದಲಿ ಆಟಗಾರನಾಗಿ ಅಂಗಳಕ್ಕಿಳಿದ ಕ್ರಿಸ್ಟಿಯಾನೊ ರೊನಾಲ್ಡೊ, ದ್ವಿತೀಯಾರ್ಧದಲ್ಲಿ ಗೋಲು ಗಳಿಸಿ ಯುವೆಂಟಸ್‌ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅಟ್ಲೆಟಿ ಅಜುರಿ ಡಿಟಾಲಿಯಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಸೀರಿ ‘ಎ’ ಫುಟ್‌ಬಾಲ್‌ ಪಂದ್ಯದಲ್ಲಿ ಯುವೆಂಟಸ್‌ 2–2 ಗೋಲುಗಳಿಂದ ಅಟ್ಲಾಂಟ ತಂಡದ ಎದುರು ಡ್ರಾ ಮಾಡಿಕೊಂಡಿತು. ಇದರೊಂದಿಗೆ ಯುವೆಂಟಸ್‌, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿತು. 18 ಪಂದ್ಯಗಳನ್ನು ಆಡಿರುವ ಈ ತಂಡ 16ರಲ್ಲಿ ಗೆದ್ದಿದ್ದು ಒಟ್ಟು 50 ಪಾಯಿಂಟ್ಸ್‌ ಕಲೆಹಾಕಿದೆ. ತವರಿನ ಅಭಿಮಾನಿಗಳ ಎದುರು ಆಡಿದ ಅಟ್ಲಾಂಟ ತಂಡಕ್ಕೆ ಆರಂಭದಲ್ಲೇ ಸಂಕಷ್ಟ ಎದುರಾಯಿತು.ಎರಡನೇ ನಿಮಿಷದಲ್ಲಿ ಈ ತಂಡದ ಬೆರಟ್‌ ಜಿಮಿಸಿಟ್‌ ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಯುವೆಂಟಸ್‌ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು. ನಂತರ ಅಟ್ಲಾಂಟ ತಂಡದ ಆಟ ರಂಗೇರಿತು. ಈ ತಂಡದ ದುವಾನ್‌ ಜಾಪಾಟ 24 ಮತ್ತು 56ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಆತಿಥೇಯರಿಗೆ 2–1ರ ಮುನ್ನಡೆ ತಂದುಕೊಟ್ಟರು. 53ನೇ ನಿಮಿಷದಲ್ಲಿ ಯುವೆಂಟಸ್‌ ತಂಡದ ರಾಡ್ರಿಗೊ ಬೆಂಟಾಕರ್‌ ಒರಟು ಆಟ ಆಡಿದರು. ಹೀಗಾಗಿ ರಾಡ್ರಿಗೊಗೆ ಪಂದ್ಯದ ರೆಫರಿ ‘ಕೆಂಪು ಕಾರ್ಡ್‌’ನ ದರ್ಶನ ಮಾಡಿ ಅಂಗಳದಿಂದ ಹೊರಗೆ ಕಳುಹಿಸಿದರು. ಆದ್ದರಿಂದ ಯುವೆಂಟಸ್‌ ತಂಡಕ್ಕೆ 10 ಮಂದಿಯೊಂದಿಗೆ ಆಡಬೇಕಾದ ಅನಿವಾರ್ಯತೆ ಎದುರಾಯಿತು. 70ನೇ ನಿಮಿಷದವರೆಗೂ ಅಟ್ಲಾಂಟ ತಂಡ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಅಂಗಳಕ್ಕಿಳಿದ ರೊನಾಲ್ಡೊ ಮೋಡಿ ಮಾಡಿದರು. ಅವರು 78ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿ 2–2ರ ಸಮಬಲಕ್ಕೆ ಕಾರಣರಾದರು. ಇತರ ಪಂದ್ಯಗಳಲ್ಲಿ ಪಾರ್ಮಾ 1–0ರಲ್ಲಿ ಫಿಯೊರೆಂಟಿನಾ ಎದುರೂ, ಕ್ಯಾಗ್ಲಿಯರಿ 1–0ರಲ್ಲಿ ಜಿನೊವಾ ಮೇಲೂ, ಟೋರಿನೊ 3–0ರಲ್ಲಿ ಎಂಪೊಲಿ ವಿರುದ್ಧವೂ, ರೋಮಾ 3–1ರಲ್ಲಿ ಸಸುವೊಲೊ ಎದುರೂ ಗೆದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.