ಡ್ರಾ ಪಂದ್ಯದಲ್ಲಿ ಎಡಿಇ–ಸಿಐಎಲ್‌ ಬೆಂಗಳೂರು: ಕೊನೆಯ ಘಟ್ಟದಲ್ಲಿ ಲಭಿಸಿದ ಪೆನಾಲ್ಟಿ ಕಿಕ್ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲವಾದ ಎಡಿಇ ತಂಡ ನಿರಾಸೆಗೊಂಡಿತು. ಬೆಂಗಳೂರು ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಸಿ.ಪುಟ್ಟಯ್ಯ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಈ ತಂಡ ಸಿಐಎಲ್‌ ಎಫ್‌ಸಿ ಜೊತೆ 1–1ರಿಂದ ಡ್ರಾ ಮಾಡಿಕೊಂಡಿತು. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಬಿ’ ವಲಯದ ಪಂದ್ಯದ 26ನೇ ನಿಮಿಷದಲ್ಲಿ ಮಣಿಕಂಠನ್ ಗಳಿಸಿದ ಗೋಲಿನ ಮೂಲಕ ಎಡಿಇ ಮುನ್ನಡೆ ಸಾಧಿಸಿತ್ತು. 76ನೇ ನಿಮಿಷದಲ್ಲಿ ಪ್ರಕಾಶ್ ಗೋಲು ಗಳಿಸಿ ತಿರುಗೇಟು ನೀಡಿದರು. 82ನೇ ನಿಮಿಷದಲ್ಲಿ ಎಡಿಇಗೆ ಪೆನಾಲ್ಟಿ ಕಿಕ್‌ ಅವಕಾಶ ಲಭಿಸಿತ್ತು. ಆದರೆ ಲಿಜಿತ್ ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯಿಂದ ಆಚೆ ಸಾಗಿತು. 69ನೇ ನಿಮಿಷದಲ್ಲಿ ಜಾಕ್‌ ಅವರು ರೆಡ್ ಕಾರ್ಡ್‌ ಪಡೆದು ಹೊರನಡೆದಿದ್ದರು. ಡಿವೈಇಎಸ್‌ಗೆ ಗೆಲುವು ಪ್ರಸನ್ನ ಕುಮಾರ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ‘ಎ’ ಡಿವಿಷನ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಡಿವೈಇಎಸ್‌ ಎಫ್‌ಸಿ ತಂಡ 2–0ಯಿಂದ ಎಜಿಒಆರ್‌ಸಿ ಎಫ್‌ಸಿ ತಂಡವನ್ನು ಮಣಿಸಿತು. ಒಂಬತ್ತನೇ ನಿಮಿಷದಲ್ಲಿ ದಿಲೀಪ್ ಮತ್ತು 73ನೇ ನಿಮಿಷದಲ್ಲಿ ಧೀರಜ್ ಗೋಲು ಗಳಿಸಿದರು. ಭಾನುವಾರ ಮಧ್ಯಾಹ್ನ 1.45ಕ್ಕೆ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್‌ ಮತ್ತು ರೈಲು ಗಾಲಿ ಕಾರ್ಖಾನೆ ತಂಡಗಳು ಸೆಣಸಲಿದ್ದು 3.45ಕ್ಕೆ ನಡೆಯಲಿರುವ ‘ಸಿ’ ವಲಯದ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆನ್ಸ್ ಎಫ್‌ಸಿ ಮತ್ತು ಕಿಕ್ ಸ್ಟಾರ್ಟ್ ಎಫ್‌ಸಿ ತಂಡಗಳು ಹೋರಾಡಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.