ಐಎಸ್‌ಎಲ್‌: ಬ್ಲಾಸ್ಟರ್ಸ್‌–ಎಟಿಕೆ ಹಣಾಹಣಿ ಇಂದು ಕೊಚ್ಚಿ (ಪಿಟಿಐ): ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಗಾಗಿ ಸ್ಥಗಿತಗೊಂಡಿದ್ದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯಗಳು ಶುಕ್ರವಾರ ಪುನರಾರಂಭಗೊಳ್ಳಲಿವೆ. ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡ ಎಟಿಕೆಯನ್ನು ಎದುರಿಸಲಿದೆ. ಡಿಸೆಂಬರ್ 16ರಂದು ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಂದು ನಡೆದಿದ್ದ ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ 1–6ರಿಂದ ಸೋತಿತ್ತು. ಒಟ್ಟು 12 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವ ಬ್ಲಾಸ್ಟರ್ಸ್ ಆರರಲ್ಲಿ ಡ್ರಾ ಸಾಧಿಸಿದೆ. ಒಂಬತ್ತು ಪಾಯಿಂಟ್ ಗಳಿಸಿರುವ ತಂಡ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆದ್ದರಿಂದ ನಾಕೌಟ್ ಹಂತ ತಲುಪುವುದು ಅಸಾಧ್ಯದ ಮಾತು. ಎಟಿಕೆ 12 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದ್ದು ನಾಲ್ಕರಲ್ಲಿ ಡ್ರಾ ಸಾಧಿಸಿದೆ. 16 ಪಾಯಿಂಟ್‌ಗಳೊಂದಿಗೆ ತಂಡ ಆರನೇ ಸ್ಥಾನದಲ್ಲಿದ್ದು ನಾಕೌಟ್ ಹಂತಕ್ಕೇರುವ ಕನಸು ಜೀವಂತವಾಗಿದೆ. ಆದ್ದರಿಂದ ಗೆದ್ದು ಪಟ್ಟಿಯಲ್ಲಿ ಇನ್ನಷ್ಟು ಮೇಲೆ ಜಿಗಿಯುವ ಹಂಬಲದೊಂದಿಗೆ ಶುಕ್ರವಾರ ಕಣಕ್ಕೆ ಇಳಿಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬಿಎಫ್‌ಸಿ ಈ ಬಾರಿ ಒಂದು ಪಂದ್ಯವನ್ನೂ ಸೋತಿಲ್ಲ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.