ಫುಟ್‌ಬಾಲ್‌: ಯುವೆಂಟಸ್‌ಗೆ ಜಯ ಮಿಲಾನ್‌ : ದ್ವಿತೀಯಾರ್ಧದಲ್ಲಿ ಪಾಲೊ ಡಿಬಾಲ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಯುವೆಂಟಸ್‌ ತಂಡ ಸೀರಿ ‘ಎ’ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ. ರೆನಾಟೊ ಡ್ಯಾಲ ಆ್ಯರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪೈಪೋಟಿಯಲ್ಲಿ ಯುವೆಂಟಸ್‌ 1–0 ಗೋಲಿನಿಂದ ಬೊಲೊಗ್ನಾ ತಂಡವನ್ನು ಪರಾಭವಗೊಳಿಸಿತು. ಈ ಜಯದೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 69ಕ್ಕೆ ಹೆಚ್ಚಿಸಿಕೊಂಡಿರುವ ಯುವೆಂಟಸ್ ತಂಡವು ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಪಾಯಿಂಟ್ಸ್‌ ಪಟ್ಟಿಯಲ್ಲಿ 18ನೇ ಸ್ಥಾನ ಹೊಂದಿರುವ ಬೊಲೊಗ್ನಾ ತಂಡ ಗೋಲು ಗಳಿಸಲು ಸಿಕ್ಕ ಹಲವು ಅವಕಾಶಗಳನ್ನು ಹಾಳು ಮಾಡಿಕೊಂಡಿತು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ ಯುವೆಂಟಸ್‌ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 67ನೇ ನಿಮಿಷದಲ್ಲಿ ಡಿಬಾಲಾ ಕಾಲ್ಚಳಕ ತೋರಿ ಸಂಭ್ರಮಿಸಿದರು. ಇತರ ಪಂದ್ಯಗಳಲ್ಲಿ ರೋಮಾ 3–2ರಲ್ಲಿ ಫ್ರೊಸಿನನ್‌ ಎದುರೂ, ಸ್ಯಾಂಪ್‌ಡೋರಿಯಾ 1–0ರಲ್ಲಿ ಕ್ಯಾಗಿಲರಿ ಮೇಲೂ, ನೆಪೋಲಿ 4–0ರಲ್ಲಿ ಪಾರ್ಮಾ ವಿರುದ್ಧವೂ ಗೆದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.