ಫುಟ್‌ಬಾಲ್‌: ನರೇಶ್‌, ಲೋಹಿತ್‌ ಕಾಲ್ಚಳಕ ಬೆಂಗಳೂರು: ನರೇಶ್‌ ಮತ್ತು ಲೋಹಿತ್‌ ಅವರ ಕಾಲ್ಚಳಕದಲ್ಲಿ ಅರಳಿದ ತಲಾ ಎರಡು ಗೋಲುಗಳ ಬಲದಿಂದ ಬಿಟಿಎಂ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ‘ಬಿ’ ಡಿವಿಷನ್‌ ಲೀಗ್ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಎ’ ಗುಂ‍ಪಿನ ಹಣಾಹಣಿಯಲ್ಲಿ ಬಿಟಿಎಂ ಎಫ್‌ಸಿ 5–0 ಗೋಲುಗಳಿಂದ ತಿಲಕ್‌ ಮೆಮೋರಿಯಲ್‌ ಎಫ್‌ಸಿ ತಂಡವನ್ನು ಮಣಿಸಿತು. ಬಿಟಿಎಂ ತಂಡದ ಶ್ರೇಯಸ್‌ 12ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ನರೇಶ್‌ 33 ಮತ್ತು 54ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಲೋಹಿತ್‌ 48 ಮತ್ತು 58ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿ ಸಂಭ್ರಮಿಸಿದರು. ಇನ್ನೊಂದು ಪಂದ್ಯದಲ್ಲಿ ಸಾಯ್‌ ಎಫ್‌ಸಿ 4–1 ಗೋಲುಗಳಿಂದ ಎಕ್ಸ್‌.ಎಲ್‌.ಆರ್–8 ಎಫ್‌ಸಿ ತಂಡವನ್ನು ಮಣಿಸಿತು. ಸಾಯ್‌ ತಂಡದ ಪ್ರಥಮೇಶ್‌ 32 ಮತ್ತು 60ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಅಮೋಘ್‌ ಮತ್ತು ಗಾಡ್ವಿನ್‌ ಕ್ರಮವಾಗಿ 18 ಮತ್ತು 62ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಎಕ್ಸ್‌.ಎಲ್‌.ಆರ್‌ ತಂಡದ ಪ್ರಶಾಂತ್‌ 8ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.