ಫುಟ್‌ಬಾಲ್‌: ಭಾರತ–ಉಜ್ಬೆಕಿಸ್ತಾನ ಪೈಪೋಟಿ ನವದೆಹಲಿ: ಭಾರತ ತಂಡದವರು ಟರ್ಕಿಯ ಅಲನ್ಯಾದಲ್ಲಿ ಬುಧವಾರ ನಡೆಯುವ ಟರ್ಕಿಸ್‌ ಮಹಿಳಾ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವತ್ತ ಚಿತ್ತ ನೆಟ್ಟಿದ್ದಾರೆ. ಭಾರತ ತಂಡ ಬುಧವಾರದ ಹೋರಾಟದಲ್ಲಿ ಉಜ್ಬೆಕಿಸ್ತಾನದ ಸವಾಲು ಎದುರಿಸಲಿದೆ. ಭಾರತ ತಂಡ ರುಮೇನಿಯಾ, ಉಜ್ಬೆಕಿಸ್ತಾನ ಮತ್ತು ತುರ್ಕಮೆನಿಸ್ತಾನ ತಂಡಗಳ ಜೊತೆಗೆ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಫ್ರಾನ್ಸ್‌, ಜೋರ್ಡನ್‌, ಐರ್ಲೆಂಡ್‌ ಮತ್ತು ಟರ್ಕಿ ತಂಡಗಳು ‘ಬಿ’ ಗುಂಪಿನಲ್ಲಿ ಆಡಲಿವೆ. ಮುಂದಿನ ತಿಂಗಳು ನಡೆಯುವ ಸ್ಯಾಫ್ ಚಾಂಪಿಯನ್‌ಷಿಪ್‌ ಮತ್ತು ಏಪ್ರಿಲ್‌ನಲ್ಲಿ ಆಯೋಜನೆಯಾಗಿರುವ ಎಎಫ್‌ಸಿ ಒಲಿಂಪಿಕ್ಸ್‌ ಅರ್ಹತಾ ಸುತ್ತಿಗೆ ಪೂರ್ವಸಿದ್ಧತೆ ಕೈಗೊಳ್ಳಲು ಈ ಟೂರ್ನಿ ವೇದಿಕೆ ಎನಿಸಿದೆ. ಈ ವರ್ಷದ ಆರಂಭದಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಹೀರೊ ಗೋಲ್ಡ್‌ ಕಪ್‌ ಟೂರ್ನಿಯ ಪಂದ್ಯಗಳಲ್ಲಿ ಭಾರತದ ವನಿತೆಯರು ನೇ‍ಪಾಳ ಮತ್ತು ಮ್ಯಾನ್ಮರ್‌ ತಂಡಗಳ ವಿರುದ್ಧ ಸೋತಿದ್ದರು. 2017ರಲ್ಲಿ ನಡೆದಿದ್ದ ಏಷ್ಯಾ ಕಪ್‌ ಅರ್ಹತಾ ಟೂರ್ನಿಯ ಪಂದ್ಯದಲ್ಲಿ 1–7 ಗೋಲುಗಳಿಂದ ಭಾರತ ತಂಡ ಉಜ್ಬೆಕಿಸ್ತಾನ ಎದುರು ಪರಾಭವಗೊಂಡಿತ್ತು. ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ತಂಡ ಕಾತರವಾಗಿದೆ. ‘ನಾವು ಈ ಹಿಂದೆ ಇರಾನ್‌ನಂತಹ ಬಲಿಷ್ಠ ತಂಡಕ್ಕೆ ಆಘಾತ ನೀಡಿದ್ದೇವೆ. ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು ಟರ್ಕಿಸ್‌ ಕಪ್‌ನಲ್ಲಿ ಕಣಕ್ಕಿಳಿಯುತ್ತಿದ್ದು ಉಜ್ಬೆಕಿಸ್ತಾನವನ್ನು ಸೋಲಿಸಲು ಸನ್ನದ್ಧರಾಗಿದ್ದೇವೆ’ ಎಂದು ಭಾರತ ತಂಡದ ಆಟಗಾರ್ತಿ ಆಶಾಲತಾ ದೇವಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.