ಫುಟ್‌ಬಾಲ್‌: ಪರಿಕ್ರಮಕ್ಕೆ ಮಣಿದ ಮಿಸಾಕ ಬೆಂಗಳೂರು: ಆಟದ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದ ಪರಿಕ್ರಮ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್ಎ) ಆಶ್ರಯದ ರಾಜ್ಯ ಮಹಿಳಾ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪರಿಕ್ರಮ 4–1 ಗೋಲುಗಳಿಂದ ಮಿಸಾಕ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು. ಮಿಸಾಕ ತಂಡ ಏಳನೇ ನಿಮಿಷದಲ್ಲಿ ಖಾತೆ ತೆರೆಯಿತು. ತಾರಿಣಿ ಗೋಲು ಗಳಿಸಿ ಸಂಭ್ರಮಿಸಿದರು. 17ನೇ ನಿಮಿಷದಲ್ಲಿ ಮಿಸಾಕ ತಂಡದ ಕ್ಯಾರೋಲಿನ್‌ ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಬಾರಿಸಿದರು. ಹೀಗಾಗಿ ಪರಿಕ್ರಮ ತಂಡದ ಖಾತೆಗೆ ‘ಉಡುಗೊರೆ’ ಗೋಲು ದಾಖಲಾಯಿತು. ನಂತರ ಈ ತಂಡದ ಆಟಗಾರ್ತಿಯರು ಪ್ರಾಬಲ್ಯ ಮೆರೆದರು. 43ನೇ ನಿಮಿಷದಲ್ಲಿ ರಕ್ಷಾ ಗೋಲು ಹೊಡೆದು 2–1 ಮುನ್ನಡೆಗೆ ಕಾರಣರಾದರು. ಬಳಿಕ ಸ್ಫೂರ್ತಿ (71ನೇ ನಿಮಿಷ) ಮತ್ತು ಭುವನೇಶ್ವರಿ (84ನೇ ನಿ.) ಚೆಂಡನ್ನು ಗುರಿ ತಲುಪಿಸಿ ಪರಿಕ್ರಮ ತಂಡದ ಸಂಭ್ರಮಕ್ಕೆ ಕಾರಣರಾದರು. ದಿನದ ಇನ್ನೊಂದು ಪಂದ್ಯದಲ್ಲಿ ಬಿಯುಎಫ್‌ಸಿ 1–0 ಗೋಲಿನಿಂದ ಮಂಗಳೂರು ಯುನೈಟೆಡ್‌ ಎಫ್‌ಸಿ (ಎಂ.ಯು.ಎಫ್‌ಸಿ) ತಂಡವನ್ನು ಸೋಲಿಸಿತು. ಬಿಯುಎಫ್‌ಸಿ ತಂಡದ ಪರೋಮಿತಾ 53ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.