ಫುಟ್‌ಬಾಲ್‌: ಕ್ವೀನ್ಸ್‌ ಸ್ಟಾರ್‌ ಜಯಭೇರಿ ಬೆಂಗಳೂರು: ತನ್ಮಯ್‌ ಮತ್ತು ದಿನೇಶ್‌ ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಕ್ವೀನ್ಸ್‌ ಸ್ಟಾರ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪೈಪೋಟಿಯಲ್ಲಿ ಕ್ವೀನ್ಸ್‌ ಸ್ಟಾರ್‌ 6–2 ಗೋಲುಗಳಿಂದ ವಿವೇಕಾನಂದ ಎಫ್‌ಸಿ ಎದುರು ಗೆದ್ದಿತು. ಕ್ವೀನ್ಸ್‌ ಸ್ಟಾರ್‌ ತಂಡದ ತನ್ಮಯ್‌ 6 ಮತ್ತು 51ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ದಿನೇಶ್‌ 25 ಮತ್ತು 53ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಧನು ಮತ್ತು ಮುಕೇಶ್‌ ಕ್ರಮವಾಗಿ 29 ಮತ್ತು 60+1ನೇ ನಿಮಿಷದಲ್ಲಿ ಗೋಲು ಬಾರಿಸಿದರು. ವಿವೇಕಾನಂದ ತಂಡದ ಸುನಿಲ್ ಮತ್ತು ಪೃಥ್ವಿ ಕ್ರಮವಾಗಿ ಏಳು ಮತ್ತು 10ನೇ ನಿಮಿಷಗಳಲ್ಲಿ ಗೋಲು ಹೊಡೆದು ಸೋಲಿನ ನಡುವೆಯೂ ಗಮನ ಸೆಳೆದರು. ದಿನದ ಇನ್ನೊಂದು ಪಂದ್ಯದಲ್ಲಿ ಫ್ರೆಂಡ್ಸ್‌ ಯುನೈಟೆಡ್‌ ಎಫ್‌ಸಿ 2–0 ಗೋಲುಗಳಿಂದ ನ್ಯೂ ಲಕ್ಕಿ ಸ್ಟಾರ್‌ ಎಫ್‌ಸಿ ಎದುರು ವಿಜಯಿಯಾಯಿತು. ಫ್ರೆಂಡ್ಸ್‌ ಯುನೈಟೆಡ್‌ ಪರ ಶರತ್‌ (40ನೇ ನಿ.) ಮತ್ತು ಶೆಣೈ (50) ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.