ಫುಟ್‌ಬಾಲ್‌: ನಾಕೌಟ್‌ಗೆ ಕೋರಮಂಗಲ ಎಫ್‌ಸಿ ಬೆಂಗಳೂರು: ಕೋರಮಂಗಲ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ನಾಕೌಟ್‌ ಪ್ರವೇಶಿಸಿದ್ದಾರೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ಕೋರಮಂಗಲ ತಂಡ 2–1 ಗೋಲುಗಳಿಂದ ರೋವರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು 13 ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. ರೋವರ್ಸ್‌ ತಂಡದ ಲರ್ಹೇಶ್‌ 19ನೇ ನಿಮಿಷದಲ್ಲಿ ಗೋಲು ಗಳಿಸಿದರು. ನಂತರ ಕೋರಮಂಗಲ ಎಫ್‌ಸಿ ಆಟಗಾರರು ಕಾಲ್ಚಳಕ ತೋರಿದರು. 40ನೇ ನಿಮಿಷದಲ್ಲಿ ಸಗಾಯ್‌ ನೇಥನ್‌ ಗೋಲು ಹೊಡೆದರು. ಹೀಗಾಗಿ ಉಭಯ ತಂಡಗಳು 1–1 ಸಮಬಲದೊಂದಿಗೆ ವಿರಾಮಕ್ಕೆ ಹೋದವು. ದ್ವಿತೀಯಾರ್ಧದಲ್ಲಿ ಕೋರಮಂಗಲ ತಂಡ ಇನ್ನಷ್ಟು ಚುರುಕಾಗಿ ಆಡಿತು. 53ನೇ ನಿಮಿಷದಲ್ಲಿ ಅಂಥೋಣಿ ವಿನ್ಸೆಂಟ್‌ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು. ಇನ್ನೊಂದು ಪಂದ್ಯದಲ್ಲಿ ಗೂರ್ಖಾ ಬಾಯ್ಸ್‌ ಎಫ್‌ಸಿ 1–0 ಗೋಲಿನಿಂದ ವೆಟರನ್ಸ್‌ ಎಫ್‌ಸಿ ಎದುರು ಗೆದ್ದಿತು. 47ನೇ ನಿಮಿಷದಲ್ಲಿ ಗೋಲು ಹೊಡೆದ ಬಿಬೆಕ್‌, ಗೂರ್ಖಾ ತಂಡದ ಗೆಲುವಿನ ರೂವಾರಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.