ವೈದೇಹಿ, ರಶ್ಮಿಕಾ ಕ್ವಾರ್ಟರ್‌ ಫೈನಲ್‌ಗೆ ಬೆಂಗಳೂರು: ಭಾರತದ ವೈದೇಹಿ ಚೌಧರಿ ಮತ್ತು ಶ್ರೀವಲ್ಲಿ ರಶ್ಮಿಕಾ ಭಮಿಡಪಾಟಿ ಅವರು ಇಲ್ಲಿ ನಡೆಯುತ್ತಿರುವ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣ ದಲ್ಲಿ ಮಂಗಳವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿಯು 7-5, 6-0 ಯಿಂದ ಸ್ವದೇಶದ ಋತುಜಾ ಭೋಸ್ಲೆ ಮತ್ತು ಚೀನಾ ತೈಪೆಯ ಯೆನ್ ಶುವೋ ಲಿಯಾಂಗ್ ಅವರನ್ನು ಹಿಮ್ಮೆಟ್ಟಿಸಿತು. ವೈದೇಹಿ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾಲಿಫೈಯರ್‌ ಮೂಲಕ ಮುಖ್ಯಸುತ್ತು ಪ್ರವೇಶಿಸಿದ್ದರೆ, ರಶ್ಮಿಕಾ ಎಡವಿದ್ದರು. ಮತ್ತೊಂದು ಪಂದ್ಯದಲ್ಲಿ ಭಾರತದ ಶರ್ಮದಾ ಬಾಲು ಮತ್ತು ಶ್ರಾವ್ಯಾ ಶಿವಾನಿ ಜೋಡಿಯು 7-6 (4), 6-4ರಿಂದ ಸ್ವದೇಶದ ಸಾಯಿ ಸಂಹಿತಾ ಮತ್ತು ಸೋಹಾ ಸಾದಿ ಅವರನ್ನು ಸೋಲಿಸಿತು. ಸಿಂಗಲ್ಸ್‌ನಲ್ಲಿ ಜಪಾನ್‌ನ ಸಕುರಾ ಹೊಸೋಗಿ 6-3, 6-7 (5), 6-3 ರಿಂದ ಇಟಲಿಯ ಕ್ಯಾಮಿಲ್ಲಾ ರೊಸಾಟೆಲ್ಲೊ ವಿರುದ್ಧ ಗೆಲುವು ಸಾಧಿಸಿ 16ರ ಘಟ್ಟ ಪ್ರವೇಶಿಸಿದರು. ಇನ್ನೊಂದು ಪಂದ್ಯದಲ್ಲಿ ಸ್ಲೋವಾಕಿಯಾದ ಡಲಿಲಾ ಜಕುಪೋವಿಕ್ 6-2, 6-3 ರಿಂದ ಭಾರತದ ಸಹಜಾ ಯಮಲಪಲ್ಲಿ ಅವರನ್ನು ಮಣಿಸಿ ಮುನ್ನಡೆದರು. ಸುಮಾರು ₹ 33 ಲಕ್ಷ ಒಟ್ಟು ಬಹುಮಾನದ ಟೂರ್ನಿಯನ್ನು ಬೆಂಗಳೂರಿನ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೆಚಿ ಮತ್ತು ಕರ್ನಾಟಕದ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಉದ್ಘಾಟಿಸಿದರು. ಡಬಲ್ಸ್‌ ಪಂದ್ಯಗಳ ಫಲಿತಾಂಶ: ಭಾರತದ ಪ್ರಾರ್ಥನಾ ಜಿ.ಟಿ–ಅನಾಸ್ತಾಸಿಯಾ ಟಿಖೋನೋವಾ 6-4, 6-3ರಿಂದ ಭಾರತದ ಹುಮೇರಾ ಬಹರ್ಮಸ್–ಸೌಮ್ಯ ವಿಗ್ ವಿರುದ್ಧ; ಜಪಾನ್‌ನ ಸಾಕಿ ಇಮಾಮುರಾ–ನಹೊ ಸಾಟೊ 6-3, 6-1ರಿಂದ ಭಾರತದ ಸೋಫಿಯಾ ಲಾನ್ಸೆರೆ–ಅಂಕಿತಾ ರೈನಾ ವಿರುದ್ಧ; ಭಾರತದ ಶರ್ಮದಾ ಬಾಲು–ಶ್ರಾವ್ಯಾ ಶಿವಾನಿ ಚಿಲಕಲಪುಡಿ 7-6 (4), 6-4ರಿಂದ ಭಾರತದ ಸಾಯಿ ಸಂಹಿತಾ –ಸೋಹಾ ಸಾದಿಕ್ ವಿರುದ್ಧ; ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಪಾಟಿ–ವೈದೇಹಿ ಚೌಧರಿ 7-5, 6-0ರಿಂದ ಭಾರತದ ಋತುಜಾ ಭೋಸ್ಲೆ– ಚೀನಾ ತೈಪೆಯ ಯೆನ್ ಶುವೋ ಲಿಯಾಂಗ್ ವಿರುದ್ಧ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.