ಎಐಟಿಎ ಟೆನಿಸ್‌: ಆಮೋದಿನಿ, ರೆದಿನ್‌ ಚಾಂಪಿಯನ್‌ ಬೆಂಗಳೂರು: ರೆದಿನ್ ಪ್ರಣವ್‌ ಮತ್ತು ಆಮೋದಿನಿ ವಿಜಯ್ ಇಲ್ಲಿನ ಅಮೋಘ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿ ಆಯೋಜಿಸಿದ್ದ ಎಐಟಿಎ 16 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಶುಕ್ರವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ರೆದಿನ್ ಬಲಿಷ್ಠ ಆಟಗಾರ ಶಿವರಾಜ್ ಚಂದನ್‌ ವಿರುದ್ಧ2-6, 6-2, 6-0ರಲ್ಲಿ ಜಯ ಗಳಿಸಿದರೆ ಆಮೋದಿನಿ 6-4, 5-7, 6-1ರಲ್ಲಿ ವನ್ಯ ಶ್ರೀವಾಸ್ತವ ಅವರ ಸವಾಲು ಮೀರಿದರು. ಆಮೋದಿನಿ ಒಂದು ಹಂತದಲ್ಲಿ ಸುಲಭವಾಗಿ ಪಂದ್ಯ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಛಲ ಬಿಡದೆ ಕಾದಾಡಿದ ವನ್ಯ ಮೊದಲ ಎರಡು ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ನೀಡಿದರು. ಮೊದಲ ಸೆಟ್‌ನಲ್ಲಿ ಗೆದ್ದ ಆಮೋದಿನಿ ಎರಡನೇ ಸೆಟ್‌ನಲ್ಲಿ 5–2ರ ಮುನ್ನಡೆ ಸಾಧಿಸಿ ಮ್ಯಾಚ್ ಪಾಯಿಂಟ್‌ಗಾಗಿ ಸರ್ವ್ ಮಾಡಿದ್ದರು. ಈ ಹಂತದಲ್ಲಿ ತಿರುಗೇಟು ನೀಡಿದ ವನ್ಯ ಸೆಟ್ ಗೆದ್ದು ಸಮಬಲ ಸಾಧಿಸಿದರು. ಆದರೆ ಕೊನೆಯ ಸೆಟ್‌ನಲ್ಲಿ ಆಮೋದಿನಿ ಮೋಹಕ ಆಟದ ಮೂಲಕ ಎದುರಾಳಿಯನ್ನು ಕಂಗೆಡಿಸಿ ಸುಲಭ ಜಯ ಗಳಿಸಿದರು.‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.