ಕೃಷ್‌ಗೆ ಪ್ರಶಸ್ತಿ ‘ಡಬಲ್‌’ ಬೆಂಗಳೂರು: ಭರ್ಜರಿ ಆಟವಾಡಿದ ಕೃಷ್‌ ಅಜಯ್ ತ್ಯಾಗಿ ಇಲ್ಲಿ ನಡೆದ ಎಐಟಿಎ–ಕೆಎಸ್‌ಎಲ್‌ಟಿಎ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಶುಕ್ರವಾರ ಕೊನೆಗೊಂಡ ಟೂರ್ನಿಯ ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯು ವನ್ಯಾ ಶ್ರೀವಾತ್ಸವ್ ಅವರ ಪಾಲಾಯಿತು. ಬಾಲಕರ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಕೃಷ್‌ 6–1, 6–2ರಿಂದ ಶ್ರೀನಿಕೇತ್ ಕಣ್ಣನ್ ಅವರನ್ನು ಪರಾಭವಗೊಳಿಸಿದರು. ಡಬಲ್ಸ್‌ನಲ್ಲಿ ಅನೂಪ್ ಕೇಶವಮೂರ್ತಿ ಜೊತೆಗೂಡಿದ ಕೃಷ್‌ 2–6, 6–1 (10–5)ರಿಂದ ಅಗ್ರಶ್ರೇಯಾಂಕದ ಜೇಸನ್ ಮೈಕೆಲ್ ಡೇವಿಡ್‌–ಶ್ರೀನಿಕೇತ್ ಜೋಡಿಯನ್ನು ಸೋಲಿಸಿದರು. ಶ್ರೀ ತನ್ವಿ ದಾಸರಿ ಎದುರು 6-3, 6-3ರಿಂದ ಗೆದ್ದ ವನ್ಯಾ ಬಾಲಕಿಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗೆ ಮುತ್ತಿಕ್ಕಿದರು. ಎರಡು ವರ್ಷಗಳ ಹಿಂದೆ ಶ್ರೀನಿಕೇತ್ ಎದುರು ಮಣಿದಿದ್ದ ಕೃಷ್‌, ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಈ ಬಾರಿ ವೇಗದ ಆಟಕ್ಕೆ ಒತ್ತುಕೊಟ್ಟರು. ಮೊದಲ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್‌ ಗಳಿಸಿದ, ಸಿಲ್ವರ್ ಓಕ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಕೃಷ್‌ಗೆ ಮೂರು ಮತ್ತು ಐದನೇ ಗೇಮ್‌ಗಳಲ್ಲೂ ಬ್ರೇಕ್ ಸಿಕ್ಕಿತು. ನಾಲ್ಕನೇ ಗೇಮ್‌ನಲ್ಲಿ ಮಾತ್ರ ಸರ್ವ್ ಕಳೆದುಕೊಂಡು 6–1ರಿಂದ ಮೊದಲ ಸೆಟ್ ವಶಪಡಿಸಿಕೊಂಡರು. ಎರಡನೇ ಸೆಟ್‌ನಲ್ಲೂ ಕೃಷ್ ಪಾರಮ್ಯ ಮೆರೆದರು. ಬಾಲಕಿಯರ ಡಬಲ್ಸ್‌ ವಿಭಾಗದ ಪ್ರಶಸ್ತಿಯನ್ನು ಹರ್ಷಿಣಿ ಎನ್‌–ದಿಶಾ ಸಂತೋಷ್ ಖಂಡೋಜಿ ಜೋಡಿ ಗೆದ್ದುಕೊಂಡಿತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು 6-3, 6-2ರಿಂದ ವನ್ಯಾ ಶ್ರೀವಾತ್ಸವ್‌–ಗಗನಾ ಮೋಹನ್ ಕುಮಾರ್ ಅವರನ್ನು ಪರಾಭವಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.