ಪೋರ್ಚೆ ಗ್ರ್ಯಾನ್ ಪ್ರಿ ಟೆನಿಸ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಆ್ಯಷ್ಲೆ ಬಾರ್ಟಿ ಸ್ಟುಟ್‌ಗಾರ್ಟ್‌, ಜರ್ಮನಿ: ಅಗ್ರಶ್ರೇಯಾಂಕದ ಆ್ಯಷ್ಲೆ ಬಾರ್ಟಿ ಅವರು ಪೋರ್ಚೆ ಗ್ರ್ಯಾನ್ ಪ್ರಿ ಟೆನಿಸ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು 2-6, 6-1, 7-5ರಿಂದ ಕರೋಲಿನಾ ಪ್ಲಿಸ್ಕೊವಾ ಅವರನ್ನು ಮಣಿಸಿದರು. ಪಂದ್ಯದಲ್ಲಿ ಜಿದ್ದಾಜಿದ್ದಿ ಪೈಪೋಟಿ ಕಂಡುಬಂದಿತು. ಮೊದಲ ಸೆಟ್‌ ಹಿನ್ನಡೆ ಅನುಭವಿಸಿದ್ದ, ಆಸ್ಟ್ರೇಲಿಯಾದ ಬಾರ್ಟಿ ಎರಡು ಮತ್ತು ಮೂರನೇ ಸೆಟ್‌ಗಳನ್ನು ತಮ್ಮದಾಗಿಸಿಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಜೆಕ್ ಗಣರಾಜ್ಯದ ಆಟಗಾರ್ತಿ ಎದುರು ಐದು ಬ್ರೇಕ್ ಪಾಯಿಂಟ್ಸ್ ಗಳಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಬಾರ್ಟಿ ಅವರಿಗೆ ಎಲಿನಾ ಸ್ವಿಟೋಲಿನಾ ಅವರ ಸವಾಲು ಎದುರಾಗಿದೆ. ನಾಲ್ಕನೇ ಶ್ರೇಯಾಂಕ ಪಡೆದಿರುವ, ಉಕ್ರೇನ್‌ನ ಸ್ವಿಟೋಲಿನಾ 6-7, 7-5, 6-2ರಿಂದ ಪೆಟ್ರಾ ಕ್ವಿಟೊವಾ ಅವರನ್ನು ಪರಾಭವಗೊಳಿಸಿ ನಾಲ್ಕರ ಘಟ್ಟ ತಲು‍ಪಿದರು. ಎರಡನೇ ಶ್ರೇಯಾಂಕದ ಸಿಮೊನಾ ಹಲೆಪ್‌ 6-1, 6-4ರಿಂದ ಏಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧವೂ, ಅರಿನಾ ಸಬಲೆಂಕಾ 7-5, 4-6, 6-1ರಿಂದ ಅನ್ನಾ ಕೊಂಟಾವೇಟ್‌ ಎದುರು ಜಯಿಸಿ ಸೆಮಿಫೈನಲ್ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.