ಅನೂಪ್‌ಗೆ ಸೋಲುಣಿಸಿದ ಆರ್ಯ ಬೆಂಗಳೂರು: ಆರ್ಯ ಗಣಪತಿ ಅವರು ಎರಡನೇ ಶ್ರೇಯಾಂಕದ ಅನೂಪ್ ಕೇಶವಮೂರ್ತಿ ಅವರಿಗೆ ಸೋಲುಣಿಸುವ ಮೂಲಕ ಕೆಎಲ್‌ಎಲ್‌ಟಿಎ–ಎಐಟಿಎ 16 ವರ್ಷದೊಳಗಿನವರ ಟ್ಯಾಲೆಂಟ್‌ ಸಿರೀಸ್ ಜೂನಿಯರ್ ಟೆನಿಸ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು. ಸೋಮವಾರ ಇಲ್ಲಿ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಆರ್ಯ 6–3, 3–6, 7–6ರಿಂದ ಅನೂಪ್‌ ಅವರನ್ನು ಮಣಿಸಿದರು. ಬಾಲಕರ ಹಾಗೂ ಬಾಲಕಿಯರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಕ್ರಮವಾಗಿ ಜೇಸನ್ ಮೈಕೆಲ್ ಡೇವಿಡ್‌ ಹಾಗೂ ಗಗನಾ ಮೋಹನ್‌ ಕುಮಾರ್‌ ಪ್ರೀಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಜೇಸನ್ 6–1, 6–1ರಿಂದ ಹವಿಷ್ ಕುಮಾರ್ ಬಡ್ಡಿರೆಡ್ಡಿ ಎದುರು ಗೆದ್ದರೆ, ಗಗನಾ ಮೋಹನ್‌ ಕುಮಾರ್ 6-2, 6-2ರಿಂದ ಸಂಗೀತಾ ರಾಮನ್ ಅವರನ್ನು ಸೋಲಿಸಿದರು. ಬಾಲಕರ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ದೇವ್ ಶಿವಶಂಕರ್ 6-1, 6-3ರಿಂದ ಹನುಷ್ ಆನಂದ್ ಗಂದಿಕೋಟೆ ಎದುರು, ಆರಾಧ್ಯ ದ್ವಿವೇದಿ 6-1, 6-1ರಿಂದ ಅಕ್ಷತ್ ಜೆನಿಷ್ ವಿರುದ್ಧ, ಶ್ರೀನಿಕೇತ್ ಕಣ್ಣನ್‌ 7-5, 5-7, 7-6ರಿಂದ ಯುವರಾಜ್ ಸಂತೋಷ್ ಎದುರು ಗೆದ್ದರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಧರಣಿ ಶ್ರೀನಿವಾಸ್‌ 6-1, 6-0ರಿಂದ ಪೂರ್ವಿ ಭದ್ರಾವತಿ ಎದುರು, ಉಮಾಮ್ ಅಹಮ್ಮದ್‌ 6-1, 7-5ರಿಂದ ತನು ವಿಶ್ವಾಸ್ ವಿರುದ್ಧ, ಹೃದಯೇಶಿ ಪೈ 6-2, 7-6ರಿಂದ ತನಿಷ್ಕಾ ರಂಗನಾಥನ್ ಎದುರು ಜಯಿಸಿ ಮುನ್ನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.