ಫ್ರೆಂಚ್ ಓಪನ್‌: ಪತ್ರಿಕಾಗೋಷ್ಠಿಗೆ ಒಸಾಕ ಬಹಿಷ್ಕಾರ ಪ್ಯಾರಿಸ್: ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಸಂದರ್ಭದಲ್ಲಿ ಮಾಧ್ಯಮಗೋಷ್ಠಿಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟೆನಿಸ್ ಪಟು, ಜಪಾನ್‌ನ ನವೊಮಿ ಒಸಾಕ ಗುರುವಾರ ತಿಳಿಸಿದ್ದಾರೆ. ಬಹಿಷ್ಕಾರದ ಹಿನ್ನೆಲೆಯಲ್ಲಿ ವಸೂಲಿ ಮಾಡುವ ಶುಲ್ಕವನ್ನು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಕಾರ್ಯಕ್ಕೆ ನೀಡುವಂತೆ ಕೋರಲಾಗುವುದು ಎಂದು ಅವರು ವಿವರಿಸಿದ್ದಾರೆ. ವಿಶ್ವದ ಮಹಿಳಾ ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ಗಳಿಕೆ ಇರುವವರು 23 ವರ್ಷದ ಒಸಾಕ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ವರೆಗೆ ನಾಲ್ಕು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗಳಿಸಿದ್ದಾರೆ. ಕಳೆದ ವರ್ಷ ನಡೆದ ಅಮೆರಿಕ ಓಪನ್ ಮತ್ತು ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲೂ ಚಾಂಪಿಯನ್‌ ಆಗಿದ್ದಾರೆ. ‘ಅಥ್ಲೀಟ್‌ಗಳ ಮಾನಸಿಕ ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಮಾಧ್ಯಮಗೋಷ್ಠಿಗಳಲ್ಲಿ ಇದು ಹೆಚ್ಚು ಪ್ರತಿಫಲನವಾಗುತ್ತಿದೆ. ಸೋತ ನಂತರ ಪತ್ರಿಕಾಗೋಷ್ಠಿ ನಡೆಸುವ ಕೆಲವು ಕ್ರೀಡಾಪಟುಗಳು ಬೇಸರದಲ್ಲೇ ಉತ್ತರಿಸಲು ತಡಕಾಡುವುದನ್ನು ನಾನು ಕಂಡಿದ್ದೇನೆ’ ಎಂದು ಒಸಾಕ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಫ್ರೆಂಚ್ ಓಪನ್ ಟೂರ್ನಿ ಮುಂದಿನ ಭಾನುವಾರ ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ. ಒಸಾಕ ಈಗ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಓಪನ್: ಅರ್ಹತಾ ಸುತ್ತಿನಲ್ಲಿ ಸೋತ ಸುಮಿತ್ ನಗಾಲ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.