: ಬೆಲಿಂಡಾಗೆ ಸಿಂಗಲ್ಸ್‌ ಚಿನ್ನ ಟೋಕಿಯೊ: ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್‌ಸಿಚ್‌, ಟೋಕಿಯೊ ಕೂಟದಲ್ಲಿ ಶನಿವಾರ ಮಹಿಳಾ ಟೆನಿಸ್‌ನ ಸಿಂಗಲ್ಸ್‌ ವಿಭಾಗದ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಬೆನ್‌ಸಿಚ್‌ ಫೈನಲ್‌ ಹಣಾಹಣಿಯಲ್ಲಿ 7–5, 2–6, 6–3ರಿಂದ ಜೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೌಸೊವಾ ಅವರನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನಿಂದ ಸೆಣಸಿದರು. ಕೊನೆಯ ಎರಡು ಗೇಮ್‌ಗಳಲ್ಲಿ ಮಿಂಚಿದ ಬೆನ್‌ಸಿಚ್‌ ಸೆಟ್‌ ಕೈವಶಪಡಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಮಾರ್ಕೆಟಾ ತಿರುಗೇಟು ನೀಡಿದರು. ಹೀಗಾಗಿ ಮೂರನೇ ಸೆಟ್‌ನ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ನಿರ್ಣಾಯಕ ಸೆಟ್‌ನಲ್ಲಿ ಹಲವು ತಪ್ಪುಗಳನ್ನು ಮಾಡಿದ ಮಾರ್ಕೆಟಾ ಕೈಸುಟ್ಟುಕೊಂಡರು. ಬೆನ್‌ಸಿಚ್‌ ಭಾನುವಾರ ನಡೆಯುವ ಮಹಿಳಾ ಡಬಲ್ಸ್‌ ವಿಭಾಗದ ಚಿನ್ನದ ಪದಕದ ಪೈಪೋಟಿಯಲ್ಲಿ ವಿಕ್ಟೋರಿಜಾ ಗೊಲುಬಿಚ್‌ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಈ ಜೋಡಿ, ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೊವಾ ಮತ್ತು ಕ್ಯಾತರಿನಾ ಸಿನಿಯಾಕೊವಾ ಸವಾಲು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.