ಸುಹಿತಾಗೆ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ ಪಟ್ಟ ನವದೆಹಲಿ: ಕರ್ನಾಟಕದ ಸುಹಿತಾ ಮಾರುತಿ ಅವರು ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ 16 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬಾಲಕರ ವಿಭಾಗದಲ್ಲಿ ಮಧ್ಯಪ್ರದೇಶದ ದಕ್ಷ್ ಪ್ರಸಾದ್ ಚಾಂಪಿಯನ್ ಆದರು. ದೆಹಲಿ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಸುಹಿತಾ6-3, 2-6, 6-4ರಲ್ಲಿ ಮಹಾರಾಷ್ಟ್ರದ ಸೋನಲ್ ಪಾಟೀಲ್ ಎದುರು ಜಯ ಗಳಿಸಿದರು. ಟೂರ್ನಿಯಲ್ಲಿ ಸುಹಿತಾಗೆ ಎರಡನೇ ಶ್ರೇಯಾಂಕ ನೀಡಿದ್ದರೆ ಸೋನಲ್‌ 12ನೇ ಶ್ರೇಯಾಂಕ ಹೊಂದಿದ್ದರು. ಫೈನಲ್‌ನಲ್ಲಿ ಉತ್ತರಪ್ರದೇಶದ ರುಶಿಲ್ ಖೋಸ್ಲಾ ಅವರನ್ನು 6-3, 6-2ರಲ್ಲಿ ಮಣಿಸಿ ದಕ್ಷ್ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡರು. ಇವರಿಬ್ಬರೂ ಚಂಡೀಗಢದ ರೌಂಡ್‌ಗ್ಲಾಸ್ ಟೆನಿಸ್ ಅಕಾಡೆಮಿಯಲ್ಲಿ ಆದಿತ್ಯ ಸಚ್‌ದೇವ ಬಳಿ ತರಬೇತಿ ಪಡೆಯುತ್ತಿರುವ ಆಟಗಾರರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.