ಟೆನಿಸ್ ಟೂರ್ನಿ: ಸೆಹಜ್‌, ಪ್ರೇಶಾಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ ಬೆಂಗಳೂರು: ಸೆಹಜ್ ಸಿಂಗ್ ಪವಾರ್ ಮತ್ತು ಪ್ರೇಶಾ ಶಾಂತಮೂರ್ತಿ ಅವರು ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಎಫ್‌ಎಸ್ಎ ಅಂಗಣದಲ್ಲಿ ಸಂಭ್ರಮಿಸಿದರು. ಗುರುವಾರ ಮುಕ್ತಾಯಗೊಂಡ ಎಎಸ್‌ಟಿಎ–ಎಐಟಿಎ ಸಿಎಸ್‌3 18 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಹಜ್ ಮತ್ತು ಪ್ರೇಶಾ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎರಡೂ ವಿಭಾಗಗಳ ಫೈನಲ್ ಪಂದ್ಯಗಳು ರೋಚಕ ಹಣಾಹಣಿಯಿಂದ ಕೂಡಿದ್ದವು.ವಿದ್ಯಾನಿಕೇತನ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಸೆಹಜ್ ಸಿಂಗ್ ಬಾಲಕರ ವಿಭಾಗದಲ್ಲಿ 7-6 (7-5), 6-2ರಲ್ಲಿ ಅಕ್ಷಯ್ ಪ್ರಸಾದ್ ವಿರುದ್ಧ ಜಯ ಗಳಿಸಿದರು. ಕಾಶಿಶ್ ಕಾಂತ್ ಎದುರಿನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪ್ರೇಶಾ7-5, 6-2ರಲ್ಲಿ ಗೆಲುವು ದಾಖಲಿಸಿದರು. ಗೆದ್ದ ಇಬ್ಬರೂ 14 ವಯಸ್ಸಿನವರಾಗಿದ್ದು ಡಿಪಿಎಸ್ ಈಸ್ಟ್ ಶಾಲೆಯ ವಿದ್ಯಾರ್ಥಿನಿ ಪ್ರೇಶಾ ಮುಂದಿನ ತಿಂಗಳು 15ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬಾಲಕರ ವಿಭಾಗದ ಫೈನಲ್‌ನ ಅರಂಭದಲ್ಲೇ ಸೆಹಜ್‌ 3–1ರ ಮುನ್ನಡೆ ಸಾಧಿಸಿದ್ದರು. ಆದರೆ ತಿರುಗೇಟು ನೀಡಿದ ಅಕ್ಷಯ್ 5–4ರ ಮುನ್ನಡೆಯೊಂದಿಗೆ ನಗೆಸೂಸಿದರು. ಸೆಹಜ್ ಕೂಡ ಪಟ್ಟು ಬಿಡದೆ ಆಡಿದರು. ಹೀಗಾಗಿ ಸೆಟ್ ಟೈ ಬ್ರೇಕರ್‌ಗೆ ಸಾಗಿತು. ಭರ್ಜರಿ ಆಟದೊಂದಿಗೆ ಸೆಹಜ್ ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಸೆಹಜ್ 4–1ರ ಮುನ್ನಡೆಯೊಂದಿಗೆ ಶುಭಾರಂಭ ಮಾಡಿದರು. ಹೀಗಾಗಿ ಸುಲಭ ಜಯ ಒಲಿಯಿತು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಪ್ರೇಶಾ 4–3ರ ಮುನ್ನಡೆ ಗಳಿಸಿದ್ದಾಗ ಎದುರಾಳಿಚೇತರಿಸಿಕೊಂಡು 5–4ರ ಮುನ್ನಡೆ ಸಾಧಿಸಿದರು. ಆದರೆ ಪ್ರೇಶಾ ಸೆಟ್‌ ಗೆದ್ದು ಸಂಭ್ರಮಿಸಿದರು. ಎರಡನೇ ಸೆಟ್‌ನಲ್ಲಿ ಪ್ರೇಶಾ 5–1ರ ಮುನ್ನಡೆಯೊಂದಿಗೆ ಆರಂಭದಲ್ಲೇ ಆಧಿಪತ್ಯ ಸಾಧಿಸಿದರು. ಆಲ್‌ರೌಂಡ್ ಆಟವು ಅವರ ಗೆಲುವನ್ನು ಸುಲಭವಾಗಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.