ಎಂಟರಘಟ್ಟಕ್ಕೆ ಸಕರಿ, ಹಲೆಪ್‌ ಮಾಸ್ಕೊ: ಗ್ರೀಸ್‌ನ ಮರಿಯಾ ಸಕರಿ ಅವರು ಕ್ರೆಮ್ಲಿನ್ ಕಪ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವುದರ ಮೂಲಕ ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿದರು. ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮರಿಯಾ ಅವರು ರಷ್ಯಾದ ಆ್ಯನಾ ಕಲಿನ್ಸ್‌ಕಯಾ ಎದುರು ಕಣಕ್ಕಿಳಿದಿದ್ದರು. ಎರಡನೇ ಶ್ರೇಯಾಂಕದ ಗ್ರೀಸ್‌ ಆಟಗಾರ್ತಿ 6–2, 1–0ಯಿಂದ ಮುನ್ನಡೆಯಲ್ಲಿದ್ದ ವೇಳೆ ಆ್ಯನಾ ಅವರು ಗಾಯದ ಹಿನ್ನೆಲೆಯಲ್ಲಿ ಹಿಂದೆ ಸರಿದರು. ವಿಶ್ವದ ಅಗ್ರಕ್ರಮಾಂಕದ ಎಂಟು ಮಂದಿ ಆಡುವ ಡಬ್ಲ್ಯುಟಿಎ ಫೈನಲ್ಸ್‌ಗೆ ಮರಿಯಾ ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಮಾಜಿ ಚಾಂಪಿಯನ್‌, ರುಮೇನಿಯಾದ ಸಿಮೊನಾ ಹಲೆಪ್‌ ಕೂಡ ಎಂಟರ ಘಟ್ಟ ಪ್ರವೇಶಿಸಿದರು. ರಷ್ಯಾದ ಆಟಗಾರ್ತಿ ವೆರೋನಿಕಾ ಕುದರ್ಮೆಟೊವಾ ಎದುರು 6-1, 7-6 (4)ರಿಂದ ಅವರು ಗೆಲುವು ಪಡೆದರು. ಇನ್ನೊಂದು ಪಂದ್ಯದಲ್ಲಿ ಈಸ್ಟೋನಿಯಾದ ಅನೆಟ್‌ ಕೊಂಟಾವೇಟ್‌ ಅವರು 6-1, 6-4ರಿಂದ ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಚ್ ಅವರನ್ನು ಮಣಿಸಿ ಮುನ್ನಡೆದರು. ಪುರುಷರ ವಿಭಾಗದಲ್ಲಿ ಹಾಲಿ ಚಾಂಪಿಯನ್‌, ರಷ್ಯಾದ ಆ್ಯಂಡ್ರೆ ರುಬ್ಲೆವ್ ಆಘಾತ ಅನುಭವಿಸಿದರು. ಫ್ರಾನ್ಸ್‌ನ ಆ್ಯಡ್ರಿಯನ್ ಮನಾರಿಯೊ 5-7, 7-6 (4), 6-3ರಿಂದ ರುಬ್ಲೆವ್ ಅವರಿಗೆ ಸೋಲುಣಿಸಿ ಕ್ವಾರ್ಟರ್‌ಫೈನಲ್ ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.