ಬೆಂಗಳೂರು ಓಪನ್ ಎಟಿಪಿ: ಪ್ರಜ್ಞೇಶ್‌ ಗುಣೇಶ್ವರನ್‌ ಪ್ರೀ ಕ್ವಾರ್ಟರ್ ಫೈನಲ್‌ಗೆ ಬೆಂಗಳೂರು: ಫ್ರಾನ್ಸ್‌ನ ಮಥಿಯಾಸ್ ಬಾರ್ಗ್‌ ಅವರ ಸವಾಲನ್ನು ದಿಟ್ಟವಾಗಿ ಎದುರಿಸಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇರಿಸಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್‌7-6 (4), 6-2ರಲ್ಲಿ ಜಯ ಗಳಿಸಿದರು. ಟೂರ್ನಿಯಲ್ಲಿ ಭಾರತದ ಇತರ ಆಟಗಾರರು ಹೊರಬಿದ್ದರು. ಫ್ರಾನ್ಸ್‌ನ ಮತ್ತೊಬ್ಬ ಆಟಗಾರ ಅಲೆಕ್ಸಾಂಡರ್ ಮುಲ್ಲರ್ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡರು. ಎರಡನೇ ಶ್ರೇಯಾಂಕಿತ ಇಟಲಿಯ ಸ್ಟೆಫನೊ ಟ್ರವಗಿಲಾ ಎದುರಿನ ಪಂದ್ಯದಲ್ಲಿ ಅವರು 6-1, 7-6 (2)ರಲ್ಲಿ ಜಯ ಗಳಿಸಿ 16ರ ಘಟ್ಟ ಪ್ರವೇಶಿಸಿದರು. ಅಗ್ರ ಶ್ರೇಯಾಂಕದ ಆಟಗಾರ ಜೆಕ್ ಗಣರಾಜ್ಯದ ಜಿರಿ ವೆಸೆಲಿ ಸ್ವಿಟ್ಜರ್ಲೆಂಡ್‌ನ ಆ್ಯಂಟೊಯ್ನ್ ಬೆಲಿಯರ್ ಅವರ ಸವಾಲನ್ನು ಮೀರಿ6-3, 6-7 (2), 6-2ರಲ್ಲಿ ಗೆಲುವು ಸಾಧಿಸಿದರು. ಟೂರ್ನಿಯಲ್ಲಿ ಆಡುತ್ತಿರುವ ಭಾರತದ ಆಟಗಾರರ ಪೈಕಿ ಗರಿಷ್ಠ ರ‍್ಯಾಂಕಿಂಗ್ ಹೊಂದಿರುವ ಆಟಗಾರ ರಾಮ್‌ಕುಮಾರ್ ರಾಮನಾಥನ್ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದರಾದರೂ ಸೋತು ಹೊರಬಿದ್ದರು. ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಎದುರಿನ ಹಣಾಹಣಿಯಲ್ಲಿ ಅವರು6-3, 0-6, 5-7ರಲ್ಲಿ ಸೋತರು. ಮೊದಲ ಸೆಟ್‌ನ ಮೂರನೇ ಗೇಮ್‌ನ ಆರಂಭದಲ್ಲೇ ಎದುರಾಳಿಯ ಸರ್ವ್ ಮುರಿದ 32 ವರ್ಷದ ಪ್ರಜ್ಞೇಶ್‌ ಅವರು ಅಮೋಘ ಆಟದ ಮೂಲಕ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದರು. ಏಳು ಮತ್ತು ಎಂಟನೇ ಗೇಮ್‌ನಲ್ಲಿ ಫ್ರಾನ್ಸ್ ಆಟಗಾರ ತಿರುಗೇಟು ನೀಡಿದರು. ಆದ್ದರಿಂದ ಸೆಟ್ ಟೈಬ್ರೇಕರ್‌ಗೆ ಸಾಗಿತು. ಈ ಹಂತದಲ್ಲಿ ಪ್ರಜ್ಞೇಶ್ ಛಲದಿಂದ ಆಡಿ ಗೆಲುವು ಸಾಧಿಸಿದರು. ಎರಡನೇ ಸೆಟ್‌ನ ಆರಂಭದಲ್ಲೂ ಪ್ರಜ್ಞೇಶ್‌ ಬ್ರೇಕ್ ಪಾಯಿಂಟ್ ಮೂಲಕ ಮಿಂಚಿದರು. ಎಡಗೈ ಆಟಗಾರನ ತಂತ್ರಗಳಿಗೆ ನಿರಾಶೆಗೊಳಗಾದ ಮಥಿಯಾಸ್ ಅವರು ಒಂದು ಹಂತದಲ್ಲಿ ರ‍್ಯಾಕೆಟ್ ನೆಲಕ್ಕೆ ಬಡಿದು ಅಸಮಾಧಾನ ವ್ಯಕ್ತಪಡಿಸಿದರು. 32ರ ಘಟ್ಟದ ಪಂದ್ಯಗಳ ಫಲಿತಾಂಶಗಳು ಬ್ರೆಜಿಲ್‌ನ ಗ್ಯಾಬ್ರಿಯಲ್ ಡಿಕ್ಯಾಂಪ್ಸ್‌ಗೆ ಇಟಲಿಯ ಫೆಡರಿಕೊ ಗಾಯೊ ಎದುರು 6-3, 6-3ರಲ್ಲಿ ಜಯ; ಟುನೀಷಿಯಾದ ಆಲ್ಟಗ್ ಸೆಲಿಕ್‌ಬೆಲೆಕ್‌ಗೆ ಭಾರತದ ಅರ್ಜುನ್ ಖಾಡೆ ವಿರುದ್ಧ 6-1, 6-2ರಲ್ಲಿ ಜಯ; ಕ್ರೊವೇಷಿಯಾದ ಬೋರ್ನ ಗೋಜೊಗೆ ಜಪಾನ್‌ನ ರಿಯೊ ನೊಗುಚಿ ವಿರುದ್ಧ 3-6, 6-1, 6-2ರಲ್ಲಿ ಗೆಲುವು; ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲರ್‌ಗೆ ಇಟಲಿಯ ಸ್ಟೆಫನೊ ಟ್ರವಾಗ್ಲಿಯಾ ಎದುರು 6-1, 7-6 (2)ರಲ್ಲಿ ಜಯ; ಜೆಕ್ ಗಣರಾಜ್ಯದ ಜಿರಿ ವೆಸೆಲಿಗೆ ಸ್ವಿಟ್ಜರ್ಲೆಂಡ್‌ನ ಆ್ಯಂಟೊನಿಯೊ ಬೆಲಿಯರ್‌ ವಿರುದ್ಧ 6-3, 6-7 (2), 6-2ರಲ್ಲಿ ಜಯ; ಟರ್ಕಿಯ ಸೆಮ್‌ ಇಲ್ಕೆಲ್‌ಗೆ ಕೆನಡಾದ ಸ್ಟೀವನ್ ಡಿಯೆಜ್‌ ವಿರುದ್ಧ 6-2, 6-3ರಲ್ಲಿ ಜಯ; ಭಾರತದ ಪ್ರಜ್ಞೇಶ್ ಗುಣೇಶ್ವರ್‌ಗೆ ಫ್ರಾನ್ಸ್‌ನ ಮಥಿಯಾಸ್ ಬಾರ್ಗ್‌ ಎದುರು 7-6 (4), 6-2ರಲ್ಲಿ ಗೆಲುವು. ಬಲ್ಗೇರಿಯಾದ ದಿಮಿತರ್ ಕುಜ್ಮನೊವ್‌ಗೆ ಭಾರತದ ಪ್ರಜ್ವಲ್ ದೇವ್ ಎದುರು 6-2, 6-2ರಲ್ಲಿ, ರಷ್ಯಾದ ಎವ್ಜೆನಿ ಡೊನ್‌ಸ್ಕೊಯ್‌ಗೆ ಟುನೀಷಿಯಾದ ಮಲೆಕ್‌ ಜಿಜಿರಿ ಎದುರು 7-6 (10), 6-4ರಲ್ಲಿ; ಫ್ರಾನ್ಸ್‌ನ ಎನ್ಜೊ ಕೊಕಡ್‌ಗೆ ಭಾರತದ ಋಷಿ ರೆಡ್ಡಿ ವಿರುದ್ಧ 6-1, 6-3ರಲ್ಲಿ, ಆಸ್ಟ್ರೇಲಿಯಾದ ಮ್ಯಾಕ್ಸ್‌ ಪರ್ಸೆಲ್‌ಗೆ ಭಾರತದ ರಾಮ್‌ಕುಮಾರ್ ರಾಮನಾಥನ್‌ ಎದುರು 3-6, 6-0, 7-5ರಲ್ಲಿ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.