ರಾಮ್‌ಕುಮಾರ್‌, ಪ್ರಜ್ಞೇಶ್‌ಗೆ ನೇರ ಅರ್ಹತೆ ಬೆಂಗಳೂರು: ಭಾರತದ ರಾಮ್‌ಕುಮಾರ್ ರಾಮನಾಥನ್ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಗೆ ನೇರ ಪ್ರವೇಶ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು (ಕೆಎಸ್‌ಎಲ್‌ಟಿಎ)ಉದ್ಯಾನ ನಗರಿಯಲ್ಲಿ ಫೆಬ್ರುವರಿ 6ರಿಂದ 20ರವರೆಗೆ ಎರಡು ಲೆಗ್‌ಗಳಲ್ಲಿ ಟೂರ್ನಿಯನ್ನು ಆಯೋಜಿಸುತ್ತಿದೆ. ಅಂದಾಜು ಒಟ್ಟು ₹ 80 ಲಕ್ಷ ಬಹುಮಾನದ ಮೊತ್ತದ ಟೂರ್ನಿ ಇದಾಗಿದೆ. ವಿಶ್ವ ಕ್ರಮಾಂಕದಲ್ಲಿ 182ನೇ ಸ್ಥಾನದಲ್ಲಿರುವ ರಾಮ್‌ಕುಮಾರ್ ಮತ್ತು 2018ರ ಚಾಂಪಿಯನ್‌ ಪ್ರಜ್ಞೇಶ್ ಗುಣೇಶ್ವರನ್‌ ನೇರ ಅರ್ಹತೆ ಗಳಿಸಿದ್ದಾರೆ. 2017ರ ಚಾಂಪಿಯನ್‌ ಸುಮಿತ್ ನಗಾಲ್ ಅವರು ಗಾಯದ ಕಾರಣ ಈ ಬಾರಿ ಟೂರ್ನಿಗೆ ಲಭ್ಯರಿಲ್ಲ. ಒಟ್ಟು 21 ಮಂದಿಗೆ ನೇರ ಪ್ರವೇಶ ಸಿಕ್ಕಿದೆ. ಮೂರು ಮಂದಿ ವೈಲ್ಡ್‌ ಕಾರ್ಡ್‌, ಆರು ಮಂದಿ ಕ್ವಾಲಿಫೈಯರ್ಸ್‌ಗಳಿಂದ ಮುಖ್ಯ ಸುತ್ತಿಗೆ ಆಯ್ಕೆಯಾಗಿದ್ದಾರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರ ಸ್ಥಾನದಲ್ಲಿರುವ ಜೆಕ್‌ ಗಣರಾಜ್ಯದ ಜಿರಿ ವೆಸ್ಲಿ ಮತ್ತು ಇಟಲಿಯ ಸ್ಟೆಫಾನೊ ಟ್ರವಾಗ್ಲಿಯಾ ಟೂರ್ನಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಈ ಕುರಿತು ಮಾತನಾಡಿರುವ ಕೆಎಸ್‌ಎಲ್‌ಟಿಎ ಅಧ್ಯಕ್ಷ, ರಾಜ್ಯ ಕಂದಾಯ ಸಚಿವ ಆರ್‌.ಅಶೋಕ ಅವರು ‘ಪ್ರತಿಷ್ಠಿತ ಟೂರ್ನಿಯಲ್ಲಿ 20ಕ್ಕೂ ಹೆಚ್ಚು ದೇಶಗಳ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಟೂರ್ನಿಯನ್ನು 2017ರಿಂದಲೂ ಆಯೋಜಿಸಲಾಗುತ್ತಿದೆ. ಕೋವಿಡ್‌ ಕಾರಣದಿಂದ ಹೋದ ವರ್ಷ ನಡೆಸಿರಲಿಲ್ಲ. ಟೂರ್ನಿಯಿಂದ ದೇಶದ ಅದರಲ್ಲೂ ಕರ್ನಾಟಕದ ಆಟಗಾರರಿಗೆ ಹೆಚ್ಚು ಅನುಕೂಲವಾಗಲಿದೆ‘ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.