ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್‌: ಪ್ರಜ್ಞೇಶ್‌ಗೆ ಪ್ರಶಸ್ತಿ ಮೇಲೆ ಕಣ್ಣು ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಚಾಂಪಿಯನ್ ಆಗಿದ್ದ ತಮಿಳುನಾಡಿನ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಇದೇ ಆರರಂದು ಆರಂಭವಾಗಲಿವೆ. ಸದ್ಯ ಪುಣೆಯಲ್ಲಿ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯಲ್ಲಿ ಆಡುತ್ತಿರುವ ಅವರು ಅಲ್ಲಿಂದ ಆಯೋಜಕರಿಗೆ ಸಂದರ್ಶನ ನೀಡಿದರು. ಬೆಂಗಳೂರು ಓಪನ್‌ ಟೂರ್ನಿಯ 2018ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಅವರು ಬೆಂಗಳೂರನ್ನು ತಮ್ಮ ಎರಡನೇ ತವರಾಗಿ ಕಾಣುತ್ತಿದ್ದಾರೆ. ‌ ‘ಬೆಂಗಳೂರಿಗೆ ಸಂಬಂಧಿಸಿದ ನೆನಪುಗಳು ಮಧುರ. ಕೆಎಸ್‌ಎಲ್‌ಟಿಎ ಅಂಗಣದಲ್ಲಿ ತುಂಬ ಕಾಲ ಅಭ್ಯಾಸ ಮಾಡಿದ್ದೇನೆ. ಬೆಂಗಳೂರು ಓಪನ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಿದೆ. ಇತರ ಟೂರ್ನಿಗಳಲ್ಲೂ ಅಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಚೆನ್ನೈ ಬಿಟ್ಟರೆ ಬೆಂಗಳೂರು ನನಗೆ ಅತ್ಯಂತ ಪ್ರಿಯ ನಗರ’ ಎಂದು 32 ವರ್ಷದ ಪ್ರಜ್ಞೇಶ್ ಹೇಳಿದ್ದಾರೆ. ವಿಶ್ವ ಕ್ರಮಾಂಕದಲ್ಲಿ 228ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಅವರು ಬೆಂಗಳೂರು ಓಪನ್‌ನ ಮುಖ್ಯ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ. ಎರಡು ಎಟಿಪಿ ಚಾಲೆಂಜರ್‌ ಮತ್ತು ಒಂಬತ್ತು ಐಟಿಎಫ್‌ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಅವರು ಕಳೆದ ವರ್ಷ ಕೋವಿಡ್‌ನಿಂದಾಗಿ ಸಂಕಷ್ಟ ಅನುಭವಿಸಿದ್ದರು. ‘ಕಳೆದ ವರ್ಷ ನಿರೀಕ್ಷಿತ ಸಾಧನೆ ಮಾಡಲು ಆಗಲಿಲ್ಲ. ಸಮರ್ಪಕವಾಗಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಗಾಯದ ಸಮಸ್ಯೆಯೂ ಕಾಡಿತ್ತು. ಕಳೆದ ಎರಡು ತಿಂಗಳಿನಿಂದ ಎಲ್ಲವೂ ಸರಿ ಹೋಗಿದೆ’ ಎಂದು ಎಡಗೈ ಆಟಗಾರ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.