ವಿಂಬಲ್ಡನ್ ಅರ್ಹತಾ ಸುತ್ತು: ರಾಮಕುಮಾರ್, ಭಾಂಬ್ರಿಗೆ ನಿರಾಸೆ ಲಂಡನ್‌: ಭಾರತದ ಯೂಕಿ ಭಾಂಬ್ರಿ ಮತ್ತು ರಾಮಕುಮಾರ್ ರಾಮನಾಥನ್ ಅವರು ವಿಂಬಲ್ಡನ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ತಡೆ ದಾಟುವಲ್ಲಿ ವಿಫಲರಾದರು. ಸೋಮವಾರ ರಾತ್ರಿ ನಡೆದ ಅರ್ಹತಾ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲೇ ಇಬ್ಬರೂ ಆಟಗಾರರು ನಿರಾಸೆ ಅನುಭವಿಸಿದರು. ಯೂಕಿ 5–7, 1–6ರಿಂದ ಅಗ್ರಶ್ರೇಯಾಂಕದ, ಸ್ಪೇನ್ ಆಟಗಾರ ಬೆರ್ನಾಬೆ ಜಾಪ್ಟಾ ಮಿರಾಲಸ್‌ ಎದುರು ಸೋತರೆ, ರಾಮ್‌ಕುಮಾರ್‌5-7, 4-6ರಿಂದ ಜೆಕ್‌ ಗಣರಾಜ್ಯದ ವಿಟ್‌ ಕೊಪ್ರಿವಾ ಅವರಿಗೆ ಮಣಿದರು. ಯೂಕಿ ಮತ್ತು ರಾಮನಾಥನ್ ಅವರ ಸೋಲಿನೊಂದಿಗೆ ಸಾನಿಯಾ ಮಿರ್ಜಾ ಮಾತ್ರ ಟೂರ್ನಿಯಲ್ಲಿ ಆಡಲಿರುವ ಭಾರತದ ಏಕೈಕ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿಯಾಗಿರುವ ಸಾನಿಯಾ, ಜೆಕ್‌ ಗಣರಾಜ್ಯದ ಲೂಸಿ ಹ್ರದೆಕಾ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಬೆಲಾರೂಸ್ ಆಟಗಾರರಿಗೆ ಈ ವರ್ಷದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ. ಹೀಗಾಗಿ ಎಟಿಪಿ ಪಾಯಿಂಟ್ಸ್ ನೀಡುತ್ತಿಲ್ಲ. ಈ ಕಾರಣದಿಂದಾಗಿ ಭಾರತದ ರೋಹನ್ ಬೋಪಣ್ಣ ಈ ಬಾರಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಜೊಕೊವಿಚ್‌ಗೆ ಅಗ್ರಶ್ರೇಯಾಂಕ: ಈ ಬಾರಿಯ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರಿಗೆ ಅಗ್ರಶ್ರೇಯಾಂಕ ನೀಡಲಾಗಿದೆ. ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಡೇನಿಯಲ್ ಮೆಡ್ವೆಡೆವ್ ಅವರಿಗೆ ಈ ಟೂರ್ನಿಯಲ್ಲಿ ಆಡುವ ಅವಕಾಶ ನಿರಾಕರಿಸಲಾಗಿದೆ. ಎರಡನೇ ರ‍್ಯಾಂಕಿನ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಗಾಯದ ಹಿನ್ನಡೆಯಲ್ಲಿ ಆಡುತ್ತಿಲ್ಲ. ಹೀಗಾಗಿ ಮೂರನೇ ಸ್ಥಾನದಲ್ಲಿರುವ ಜೊಕೊವಿಚ್‌ ಅವರಿಗೆ ಅಗ್ರಶ್ರೇಯಾಂಕ ಲಭಿಸಿದೆ. ಸ್ಪೇನ್‌ನ ರಫೆಲ್ ನಡಾಲ್ ಅವರಿಗೆ ಎರಡನೇ ಶ್ರೇಯಾಂಕ ನೀಡಲಾಗುತ್ತದೆ. ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ರ‍್ಯಾಂಕಿನ ಪೋಲೆಂಡ್ ಆಟಗಾರ್ತಿ ಇಗಾ ಸ್ವೆಟೆಕ್ ಅವರಿಗೆ ಮೊದಲ ಶ್ರೇಯಾಂಕ ಲಭಿಸಲಿದೆ. ಈಸ್ಟೋನಿಯಾದ ಅನೆಟ್‌ ಕೊಂಟಾವೇಟ್‌ ಎರಡನೇ ಶ್ರೇಯಾಂಕದೊಂದಿಗೆ ಆಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.