ಟೆನಿಸ್ ಅಂಕಣಕ್ಕೆ ಮರಳಿದ ಸೆರೆನಾ ಈಸ್ಟ್‌ಬಾರ್ನ್: ದೀರ್ಘ ಬಿಡುವಿನ ನಂತರ ಟೆನಿಸ್ ಅಂಕಣಕ್ಕೆ ಮರಳಿದ ಸೆರೆನಾ ವಿಲಿಯಮ್ಸ್‌ ಜಯದ ಆರಂಭ ಮಾಡಿದರು. ಮಂಗಳವಾರ ಇಲ್ಲಿ ನಡೆದ ಈಸ್ಟ್‌ಬಾರ್ನ್ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಸೆರೆನಾ ಮತ್ತು ಆನ್ಸ್ ಜುಬೇರ್ ಅವರೊಂದಿಗೆ 2-6, 6-3, 13-11 ರಲ್ಲಿ ಸಾರಾ ಸೊರಿಬಸ್ ಮತ್ತು ಮಾರಿ ಬುಜ್‌ಕೊವಾ ಜೋಡಿಯನ್ನು ಮಣಿಸಿದರು. ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿದರು. 23 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿರುವ ದಾಖಲೆಯ ಒಡತಿ ಸೆರೆನಾ ಹೋದ ವರ್ಷದ ವಿಂಬಲ್ಡನ್ ನಂತರ ಕಣಕ್ಕಿಳಿದಿರಲಿಲ್ಲ. ಆ ಟೂರ್ನಿಯಲ್ಲಿ ಅವರು ಗಾಯಗೊಂಡು ಹೊರನಡೆದಿದ್ದರು. 40 ವರ್ಷದ ಸೆರೆನಾ ಅವರು ತಾವು ವೃತ್ತಿಪರ ಟೆನಿಸ್‌ಗೆ ಮರಳುವ ಕುರಿತು ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಅದಕ್ಕೂ ಮುನ್ನ ಅವರು ಟೆನಿಸ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಇದೇ 27ರಂದು ವಿಂಬಲ್ಡನ್ ಶುರುವಾಗಲಿದೆ. ಈ ಹೊತ್ತಿನಲ್ಲಿ ಸೆರೆನಾ ಕಣಕ್ಕೆ ಮರಳಿರುವುದು ಟೆನಿಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಸೆರೆನಾ ಮತ್ತು ಟ್ಯುನಿಷಿಯಾದ ಜೆಬೇರ್ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.