ಫುಟ್‌ಬಾಲ್‌: ವಲೆನ್ಸಿಯಾಗೆ ಕೊಪಾ ಡೆಲ್‌ ರೇ ಗರಿ ಸೆವಿಲ್ಲೆ, ಸ್ಪೇನ್‌ : ಬಲಿಷ್ಠ ಬಾರ್ಸಿಲೋನಾ ತಂಡಕ್ಕೆ ಆಘಾತ ನೀಡಿದ ವಲೆನ್ಸಿಯಾ, ಕೊಪಾ ಡೆಲ್‌ ರೇ (ಕಿಂಗ್ಸ್‌ ಕಪ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ. ಶನಿವಾರ ರಾತ್ರಿ ನಡೆದ ಪ್ರಶಸ್ತಿ ಸುತ್ತಿನ ‍ಪೈಪೋಟಿಯಲ್ಲಿ ವಲೆನ್ಸಿಯಾ 2–1 ಗೋಲುಗಳಿಂದ ಗೆದ್ದಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ವಲೆನ್ಸಿಯಾ, 21ನೇ ನಿಮಿಷದಲ್ಲಿ ಖಾತೆ ತೆರೆಯಿತು. ಕೆವಿನ್‌ ಗೆಮೀರೊ ಕಾಲ್ಚಳಕ ತೋರಿದರು. ನಂತರದ ಹತ್ತು ನಿಮಿಷ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. 33ನೇ ನಿಮಿಷದಲ್ಲಿ ವಲೆನ್ಸಿಯಾ ತಂಡ ಮುನ್ನಡೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಡ್ರಿಗೊ, ಗೋಲು ಹೊಡೆದು ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ದ್ವಿತೀಯಾರ್ಧದಲ್ಲಿ ಬಾರ್ಸಿಲೋನಾ ತಂಡದ ಆಟ ರಂಗೇರಿತು. 73ನೇ ನಿಮಿಷದಲ್ಲಿ ಲಯೊನೆಲ್‌ ಮೆಸ್ಸಿ ಮೋಡಿ ಮಾಡಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಚುರುಕಾಗಿ ಗುರಿ ಮುಟ್ಟಿಸಿದ ಅವರು ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ನಂತರದ ಅವಧಿಯಲ್ಲಿ ತಂಡವು ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಆದರೆ ವಲೆನ್ಸಿಯಾ ತಂಡದ ರಕ್ಷಣಾ ಕೋಟೆ ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಲು ಬಾರ್ಸಿಲೋನಾ ಆಟಗಾರರಿಗೆ ಆಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.