ಫುಟ್‌ಬಾಲ್‌: ಅಫ್ಗಾನ್‌ಗೆ ಗೆಲುವು ಬೆಂಗಳೂರು: ಗೌರವ್‌ ಮತ್ತು ಡೇವಿಡ್‌ ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಅಫ್ಗಾನ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಸೋಮವಾರ ನಡೆದ ‘ಕೆ’ ಗುಂಪಿನ ಹೋರಾಟದಲ್ಲಿ ಅಫ್ಗಾನ್‌ 9–0 ಗೋಲುಗಳಿಂದ ವೇಲು ಸೋಷಿಯಲ್‌ ಎಫ್‌ಸಿ ತಂಡವನ್ನು ಮಣಿಸಿತು. ವೇಲು ತಂಡದ ಕಾರ್ತಿಕ್‌, ಒಂಬತ್ತನೇ ನಿಮಿಷದಲ್ಲಿ ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಅಫ್ಗಾನ್‌ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು. ನಂತರ ಅಫ್ಗಾನ್‌ ತಂಡದ ಅಲೆನ್‌ (18ನೇ ನಿಮಿಷ), ಮನೀಷ್‌ (29), ಪ್ರಜಿತ್‌ (30), ಪ್ರಶಾಂತ್‌ (31), ಡೇವಿಡ್‌ (40 ಮತ್ತು 43) ಹಾಗೂ ಗೌರವ್‌ (45 ಮತ್ತು 48ನೇ ನಿ.) ಕಾಲ್ಚಳಕ ತೋರಿದರು. ‘ಐ’ ವಲಯದ ಪಂದ್ಯದಲ್ಲಿ ಮಾಡರ್ನ್‌ ಬಾಯ್ಸ್‌ ಎಫ್‌ಸಿ 5–0 ಗೋಲುಗಳಿಂದ ಕೊಂಕಣ ಎಫ್‌ಸಿ ಎದುರು ವಿಜಯಿಯಾಯಿತು. ಮಾಡರ್ನ್‌ ತಂಡದ ಅಜಯ್‌ ಆಡ್ರಿಯನ್‌ (25 ಮತ್ತು 53ನೇ ನಿ.) ಎರಡು ಗೋಲು ಗಳಿಸಿದರು. ವಿಕಿ (47 ಮತ್ತು 59 ನೇ ನಿ.) ಕೂಡಾ ಮೋಡಿ ಮಾಡಿದರು. ವಿನೀತ್‌ ರಾಜ್‌ (58ನೇ ನಿ.) ಒಂದು ಗೋಲು ದಾಖಲಿಸಿ ಗಮನ ಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.