ಬ್ಯಾಡ್ಮಿಂಟನ್: ಬಿಎಐ ವಿರುದ್ಧ ಸೈನಾ ನೆಹ್ವಾಲ್ ಕಿಡಿ ನವದೆಹಲಿ: ಬ್ಯಾಡ್ಮಿಂಟನ್ ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ಕಡಿಮೆ ಕಾಲಾವಕಾಶದಲ್ಲಿ ನಡೆಸಲಾಗುತ್ತಿದೆ. ಈ ರೀತಿ ಟ್ರಯಲ್ಸ್‌ ನಿಗದಿಪಡಿಸಿರುವುದು ಸರಿಯಲ್ಲ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಿಎಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬರುವ ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಭಾರತ ತಂಡಗಳ ಆಯ್ಕೆ ಪ್ರಕ್ರಿಯೆ ಶುಕ್ರವಾರ ಆರಂಭವಾಗಲಿದ್ದು, ತಾವು ಭಾಗವಹಿಸುತ್ತಿಲ್ಲವೆಂದು ಮೂರು ದಿನಗಳ ಹಿಂದೆ ಸೈನಾ ಬಿಎಐಗೆ ತಿಳಿಸಿದ್ದರೆಂದು ವರದಿಯಾಗಿತ್ತು. ಕಾಮನ್‌ವೆಲ್ತ್ ಕೂಟದಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಸೈನಾ, ‘ಕಾಮನ್‌ವೆಲ್ತ್ ಮತ್ತು ಏಷ್ಯಾಡ್ ಚಾಂಪಿಯನ್ ಪಟ್ಟವನ್ನು ನಾನು ಉಳಿಸಿಕೊಳ್ಳಲು ಇಚ್ಛಿಸುತ್ತಿಲ್ಲವೆಂಬ ವರದಿಗಳನ್ನು ಓದಿ ಅಚ್ಚರಿಯಾಯಿತು. ನಾನು ಟ್ರಯಲ್ಸ್‌ನಲ್ಲಿ ಮಾತ್ರ ಭಾಗವಹಿಸುತ್ತಿಲ್ಲ. ಮೂರು ವಾರಗಳ ಕಾಲ ಯುರೋಪ್ ಪ್ರವಾಸ ಮುಗಿಸಿ ಬಂದಿದ್ದೇನೆ. ಏಷ್ಯನ್ ಚಾಂಪಿಯನ್‌ಷಿಪ್ ಕೂಡ ಮುಂದಿರುವ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೆ’ ಎಂದಿದ್ದಾರೆ. ‘ಸೀನಿಯರ್ ಆಟಗಾರ್ತಿಯಾಗಿ ಎರಡು ವಾರಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ ದೊಡ್ಡ ಟೂರ್ನಿಗಳಲ್ಲಿ ಭಾಗವಹಿಸುವುದರಿಂದ ಗಾಯಗೊಳ್ಳುವ ಅಪಾಯವಿರುತ್ತದೆ. ಈ ವಿಷಯವನ್ನು ಬಿಎಐಗೆ ತಿಳಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟೂರ್ನಿಗಳ ವೇಳಾಪಟ್ಟಿಯ ದಟ್ಟಣೆಯ ನಡುವೆ ಟ್ರಯಲ್ಸ್‌ ಘೋಷಿಸುವುದು ಸರಿಯಲ್ಲ. ಕೇವಲ 10 ದಿನಗಳ ಸಮಯಾವಕಾಶ ನೀಡಿದ್ದು ಕಡಿಮೆಯಾಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ನಾನು ಅಗ್ರಸ್ಥಾನದಲ್ಲಿರುವ ಅಕಾನೆ (ಯಮಗುಚಿ) ವಿರುದ್ಧ ಆಲ್‌ ಇಂಗ್ಲೆಂಡ್ ಟೂರ್ನಿಯಲ್ಲಿ ಚೆನ್ನಾಗಿ ಆಡಿದ್ದೆ. ಇಂಡಿಯಾ ಓಪನ್‌ ಟೂರ್ನಿಯಲ್ಲಿ ಒಂದು ಪಂದ್ಯ ಸೋತಿದ್ದನ್ನು ನೆಪ ಮಾಡಿಕೊಂಡು ನನ್ನ ಹೊರತಳ್ಳಲು ಬಿಎಐ ಪ್ರಯತ್ನಿಸುತ್ತಿದೆ’ ಎಂದು ಒಲಿಂಪಿಯನ್ ಸೈನಾ ಅಸಮಾಧಾನ ವ್ಯಕ್ತಪಡಿಸಿದರು. ಮಾರ್ಚ್‌ 8ರಿಂದ 27ರವರೆಗೆ ಸೈನಾ ಅವರು ಜರ್ಮನ್ ಓಪನ್, ಆಲ್‌ ಇಂಗ್ಲೆಂಡ್ ಮತ್ತು ಸ್ವಿಸ್ ಓಪನ್ ಚಾಂಪಿಯನ್‌ಷಿಪ್‌ಗಳಲ್ಲಿ ಆಡಿದ್ದರು. ಕೊರಿಯಾ ಓಪನ್‌ನಿಂದ ಹಿಂದೆ ಸರಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.