ಆರು ಆಟಗಾರರು ವಾಪಸ್ ನವದೆಹಲಿ: ಕಿಂಗ್ಸ್‌ ಕಪ್‌ಫುಟ್‌ಬಾಲ್‌ ಟೂರ್ನಿಯ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಭಾರತದ 37 ಆಟಗಾರರಲ್ಲಿ ಆರು ಮಂದಿಯನ್ನು ಕೋಚ್‌ ಐಗರ್ ಸ್ಟಿಮ್ಯಾಚ್‌ ಸೋಮವಾರ ವಾಪಸ್ ಕಳುಹಿಸಿದ್ದಾರೆ. ವಿಶಾಲ್‌ ಕೇತ್, ಜರ್ಮನ್‌ಪ್ರೀತ್‌ ಸಿಂಗ್‌, ನಂದಕುಮಾರ್‌, ರೆದೀಮ್‌ ತ್ಲಾಂಗ್‌, ಬಿಕ್ರಮ್‌ಜೀತ್‌ ಸಿಂಗ್‌ ಹಾಗೂ ಸುಮೀತ್‌ ಪಸ್ಸಿ ಶಿಬಿರದಿಂದ ವಾಪಸಾದವರು. ಥಾಯ್ಲೆಂಡ್‌ನ ಬುರಿರಮ್‌ನಲ್ಲಿ ಜೂನ್‌ ಐದರಿಂದ ಎಂಟರವರೆಗೆ ಟೂರ್ನಿ ನಡೆಯಲಿದೆ. ’ಇಲ್ಲಿಯವರೆಗೆ ಆಟಗಾರರು ಶಿಬಿರದಲ್ಲಿ ತೋರಿದ ನಿರ್ವಹಣೆ ಖುಷಿ ತಂದಿದೆ. ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ 23 ಆಟಗಾರರ ಪಟ್ಟಿ ಸಿದ್ಧಪಡಿಸುವುದು ಸವಾಲಿನ ಕೆಲಸ’ ಎಂದು ಸ್ಟಿಮ್ಯಾಚ್‌ ಹೇಳಿದರು. ’ಭವಿಷ್ಯದಲ್ಲಿ ಕಾರ್ಯರೂಪಕ್ಕೆ ತರಲಾಗುವ ಕೆಲವು ಯೋಜನೆಯ ಮೇರೆಗೆ ಆರು ಮಂದಿ ಆಟಗಾರರನ್ನು ಬಿಡುಗಡೆಗೊಳಿಸಲಾಗಿದೆ. ಈ ಹಂತದಲ್ಲಿ ಅವರು ತಮ್ಮ ಫಿಟ್‌ನೆಸ್‌, ತಾಂತ್ರಿಕತೆ ಹಾಗೂ ಆಟದ ಕೌಶಲ ವೃದ್ಧಿಸಿಕೊಳ್ಳಲಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ನಿರೀಕ್ಷೆಗಳು ಏನು ಎಂಬುದನ್ನು ಆಟಗಾರರು ಹಾಗೂ ಸಿಬ್ಬಂದಿಗೆ ತಿಳಿಸಲಾಗಿದೆ’ ಎಂದು ಸ್ಟಿಮ್ಯಾಚ್‌ ನುಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.